(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಮನೆ ಸಮೀಪದ ಜಾಗದ ಬೇಲಿಯ ಬಳಿಯಿಟ್ಟ ಉರುಳಿಗೆ ದೇಹದ ಭಾಗ ಸಿಲುಕಿದ್ದರಿಂದ ಚಿರತೆಯೊಂದು ಒದ್ದಾಡಿ ಮೃತಪಟ್ಟ ಘಟನೆ ಅರಣ್ಯ ಇಲಾಖೆಯ ಬೈಂದೂರು ವಲಯದ ಕಾಲ್ತೋಡು ಯಡೇರಿ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

5-6 ವರ್ಷ ಪ್ರಾಯದ ಗಂಡು ಚಿರತೆ ಆಹಾರವರಸಿ ನಾಡಿಗೆ ಬಂದಿದ್ದು ಇಲ್ಲಿನ ಮನೆಯೊಂದರ ಸಮೀಪದ ಬೇಲಿಯಲ್ಲಿ ಇಡಲಾದ ಉರುಳಿಗೆ ಸಿಲುಕಿ ಸತ್ತಿದೆ. ಮೇಲ್ನೋಟಕ್ಕೆ ಕಾಡು ಹಂದಿ ಬೇಟೆಗಾಗಿ ಉರುಳು ಇಟ್ಟಿದ್ದು ಅದರಲ್ಲಿ ಚಿರತೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕಾಗಮಿಸುವಾಗ ಗಂಭೀರ ಸ್ಥಿತಿಯಲ್ಲಿದ್ದ ಚಿರತೆ ನರಳಾಡಿ ಉಸಿರು ಚೆಲ್ಲಿದೆ ಎಂದು ತಿಳಿದುಬಂದಿದೆ.
ಪಶುವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಎ.ಸಿ.ಎಫ್ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.
ಬೈಂದೂರು ವ್ಯಾಪ್ತಿಯಲ್ಲಿ ಅಕ್ರಮ ಬೇಟೆ ಹೆಚ್ಚಿದ್ದು ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂಬ ಆಗ್ರಹ ನಾಗರಿಕರಿಂದ ಕೇಳಿಬಂದಿದೆ.
Comments are closed.