(ವರದಿ- ಯೋಗೀಶ್ ಕುಂಭಾಸಿ)
ಉತ್ತರಕನ್ನಡ: ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಬಳಿ ಕುಂದಾಪುರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಬಗ್ಗೆ ವರದಿಯಾಗಿದೆ.

ಉತ್ತರಕನ್ನಡ ಜಿಲ್ಲೆ ಕುಮಟಾ ಮೂಲದ ರಾಮ ಗೌಡ (32) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ. ಇವರು 2017ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದು ಕಳೆದ 5 ವರ್ಷದಿಂದ ಕುಂದಾಪುರ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದರು.
ರಾಮ ಗೌಡ ಉತ್ತಮ ವಾಲಿಬಾಲ್ ಆಟಗಾರ ಆಗಿದ್ದು ಇತ್ತೀಚೆಗೆ ಸದಾ ಒಂಟಿಯಾಗಿರುತ್ತಿದ್ದ ಎನ್ನಲಾಗಿದೆ. ಈತ ಆನ್‌ಲೈನ್ ಬೆಟ್ಟಿಂಗ್ ವಿಚಾರದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಠಾಣೆಯ ಕರ್ತವ್ಯಕ್ಕೆ ಗೈರಾಗಿದ್ದ. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಆತನ ಪತ್ತೆ ಮಾಡುವ ಕಾರ್ಯ ಕೂಡ ನಡೆಸಲಾಗಿತ್ತೆನ್ನಲಾಗಿದೆ. ಮಂಗಳವಾರ ಕಾನ್ಸ್‌ಟೇಬಲ್ ಮೃತದೇಹ ಸಮುದ್ರ ತೀರದ ಪಾರ್ಕ್ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮೀಪದಲ್ಲಿ ಬ್ಯಾಗ್ ಕೂಡ ದೊರೆತಿದೆ ಎನ್ನಲಾಗಿದೆ.
ಹೊನ್ನಾವರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Comments are closed.