ಕರಾವಳಿ

ಬೈಂದೂರು ಹುಲ್ಕಡಿಕೆಯ ಮರಾಠಿ ಸಮುದಾಯಕ್ಕೆ ಇನ್ನೂ ಸಿಕ್ಕಿಲ್ಲ ಮೂಲಸೌಕರ್ಯ | ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಉಡುಪಿ: ಸ್ವಾತಂತ್ರ್ಯ ಬಂದು ಹಲವು ದಶಕಳು ಕಳೆದರೂ ಇಲ್ಲೊಂದು ಊರು ಮಾತ್ರ ಇನ್ನೂ ಯಾವುದೇ ಮೂಲಸೌಕರ್ಯದಲ್ಲಿ ಅಭಿವೃದ್ಧಿ ಹೊಂದಿಲ್ಲ. ಬುಡಕಟ್ಟು ಸಮುದಾಯದವರ ಏಳಿಗೆ ಎನ್ನುವುದು ಕೇವಲ ರಾಜಕಾರಣಿಗಳ ಭಾಷಣಕ್ಕೆ ಮಾತ್ರ ಸೀಮಿತ ಎಂಬಂತಿದೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋಳಿಹೊಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಎಳಜಿತ್ ಗ್ರಾಮದ ಹುಲ್ಕಡಿಕೆ ಗ್ರಾಮದ ಜನರ ವಾಸ್ತವ ಸ್ಥಿತಿ.

ತಾಲೂಕಿನ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಪಶ್ವಿಮ ಘಟ್ಟದ ತಪ್ಪಲು ಪ್ರದೇಶವಾದ ಹುಲ್ಕಡಿಕೆ ಎಂಬಲ್ಲಿ ಅಂದಾಜು 250 ಪರಿಶಿಷ್ಟ ಪಂಗಡಕ್ಕೆ ಸೇರುವ ಮರಾಠಿ ನಾಯ್ಕ್ ಸಮುದಾಯದ ಬುಡಕಟ್ಟು ಜನಾಂಗ ಸರಿಸುಮಾರು 300 ವರ್ಷಗಳಿಂದ ವಾಸಿಸುತ್ತಿದೆ. ಸಂಪರ್ಕ ರಸ್ತೆ, ವಿದ್ಯುತ್, ಮೊಬೈಲ್ ನೆಟ್‌ವರ್ಕ್, ಕಾಡು ಪ್ರಾಣಿಗಳ ಹಾವಳಿ ಮೊದಲಾದ ಮೂಲ ಸೌಕರ್ಯಗಳಿಲ್ಲದೆ ಇಲ್ಲಿನ ಮಂದಿ ಶೋಚನೀಯವಾಗಿ ಬದುಕುವಂತಾಗಿದ್ದು ಈವರೆಗಿನ ಜನಪ್ರತಿನಿಧಿಗಳ ಅಭಿವೃದ್ಧಿಯ ದೂರದೃಷ್ಟಿ ಚಿಂತನೆಯನ್ನು ಪ್ರಶ್ನೆ ಮಾಡುವಂತಿದೆ.

ಇಲ್ಲಿನ ಹೊಸೇರಿಯಿಂದ ಹುಲ್ಕಡಿಕೆ ಸಂಪರ್ಕದ‌ ಸುಮಾರು 3-4 ಕಿ.ಮೀ. ದೂರದ ರಸ್ತೆ ಹೊಂಡಗುಂಡಿಯಿಂದ ಕೂಡಿದ್ದು ಗ್ರಾಮವಾಸಿಗಳು ಪರಿತಪಿಸಲು ಮುಖ್ಯ ಕಾರಣವಾಗಿದೆ. 15-20 ವರ್ಷದ ಹಿಂದೆ ರಸ್ತೆ ಮಾಡಿದ್ದು ಆ ಬಳಿಕ ತೇಪೆ ಕೂಡ ಹಾಕಿಲ್ಲ. ನೂರಾರು ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಹಿರಿಯ ನಾಗಾರಿಕರು ಇದೇ ಕಚ್ಚಾ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆಯಿದೆ. ರಿಕ್ಷಾ ಅಂಬುಲೆನ್ಸ್ ಬಾರದ ಹಿನ್ನೆಲೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಹೇರಿಗೆ ನೋವಿನ ಸಂದರ್ಭ ಮಹಿಳೆಯರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಮೂಸೌಕರ್ಯಗಳಿಗೆ ಆದ್ಯತೆ ನೀಡಿ ಶೀಘ್ರ ವ್ಯವಸ್ಥೆ ಕಲ್ಪಿಸಿ ಎಂದು ಸ್ಥಳೀಯ ಮಹಿಳೆಯರು‌ ಅಸಮಾಧಾನ ಹೊರ ಹಾಕಿದರು. ಶಾಲೆ-ಕಾಲೇಜಿಗೆ ತೆರಳಲು ಬಾರೀ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರ ಹಾಕುವುದಾಗಿ ವಿದ್ಯಾರ್ಥಿಗಳು ಕೂಡ ಆಕ್ರೋಷ ವ್ಯಕ್ತಪಡಿಸಿದರು.

ಸುಮಾರು 300 ವರ್ಷದಿಂದ ಮರಾಠಿ ಜನಾಂಗ ಇಲ್ಲಿ ನೆಲೆಸಿದೆ. ಹಲವು ಶಾಸಕರೂ ಆಡಳಿತ ನಡೆಸಿದರೂ ಕೂಡ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇಂದು-ನಾಳೆ ಮಾಡುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಶಾಸಕರು, ಸ್ಥಳೀಯ ಗ್ರಾ.ಪಂ ನಮ್ಮ ಸಂಕಷ್ಟ ನೋಡಲು ಬರುತ್ತಿಲ್ಲ. ಹುಲ್ಕಡಿಕೆ ವ್ಯಾಪ್ತಿಯಲ್ಲಿ ಮರಾಠಿ ಸಮುದಾಯದವರು ಜಾಸ್ತಿಯಿದ್ದರೂ ಜನಪ್ರತಿನಿಧಿಗಳು, ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜೈಲು ವಾಸದಂತೆ ನಾವಿಲ್ಲಿ ಬದುಕುವಂತಾಗಿದೆ.

ಪುಟ್ಟಯ್ಯ ಮರಾಠಿ, ಹುಲ್ಕಡಿಕೆ

ಚುನಾವಣೆ ಬಹಿಷ್ಕಾರ ಮಾಡುತ್ತೇವೆ..!
ಕಾಡುಪ್ರಾಣಿ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ರಸ್ತೆ ಅವ್ಯವಸ್ಥೆಯಿಂದ ಊರಿಗೆ ವಾಹನಗಳು ಬರೋದಿಲ್ಲ. ಬಂದರೂ ಕೂಡ ದುಪ್ಪಟ್ಟು ಹಣ ಕೇಳುತ್ತಾರೆ. ದಿನಗೂಲಿ ಮಾಡುವ ಮಂದಿ ಹೇಗೆ ಇದನ್ನು ಭರಿಸಬೇಕು?. ಹಲವು ವರ್ಷಗಳಿಂದ ಆಶ್ವಾಸನೆ ನಂಬಿಕೊಂಡು ಬಂದಿದ್ದೇವೆ. ಕಳೆದ ಗ್ರಾ.ಪಂ ಚುನಾವಣೆ ವೇಳೆ ಬಂದ ಶಾಸಕರು ರಸ್ತೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ. ಸ್ಥಳೀಯಾಡಳಿತದಿಂದ ಹಿಡಿದು ರಾಜ್ಯ, ಕೇಂದ್ರ ಸರ್ಕಾರ ಬಿಜೆಪಿಯದ್ದಾಗಿದ್ದು ನಮ್ಮೂರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಶೀಘ್ರ ರಸ್ತೆ ನಿರ್ಮಾಣ ಸಹಿತ ಮೂಲಸೌಕರ್ಯ ಒದಗಿಸದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕುತ್ತೇವೆ
ದಿನಕರ ಮರಾಠಿ ಹುಲ್ಕಡಿಕೆ

ನಾಗರಿಕರಿಂದ ಪ್ರತಿಭಟನೆ
ಹಲವು ವರ್ಷಗಳ ಸಮಸ್ಯೆ ಈಡೇರದ ಹಿನ್ನೆಲೆ ಇತ್ತೀಚೆಗೆ ಸ್ಥಳೀಯ ನೂರಾರು ಮಂದಿ ಪ್ರತಿಭಟಿಸಿ ಆಕ್ರೋಷ ಹೊರಹಾಕಿದರು. ಪ್ರಧಾನ ಮಂತ್ರಿ ಮೋದಿಯವರು ಸಮಸ್ಯೆ ಬಗೆಹರಿಸಿ ಎಂದು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ನೋವಿನ ಬೇಡಿಕೆಯಿತ್ತರು.
ಇಲ್ಲಿನ ಜನರು, ಗರ್ಭಿಣಿಯರು ಆಸ್ಪತ್ರೆಗೆ ತೆರಳಲು ಕಷ್ಟ. ಅಂಬುಲೆನ್ಸ್, ಆಟೋದವರು ಈ ರಸ್ತೆಯಲ್ಲಿ ಬರೋದಿಲ್ಲ. ಹಲವು ವರ್ಷದಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬುಡಕಟ್ಟು ಜನಾಂಗದ ಬಗ್ಗೆ ನಾಯಕರು ಯಾಕೆ ಇಂತಹ ದೋರಣೆ ತಳೆದಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಪ್ರಧಾನಿ ಮೋದಿಯವರಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿ ರಸ್ತೆ ಸಮಸ್ಯೆ ಸರಿಪಡಿಸಿಕೊಡಿ ಎಂದು ಸುಬ್ಬಯ್ಯ ಮರಾಠಿ ಹುಲ್ಕಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶೇಷ ಚೇತನ ಮಕ್ಕಳಿದ್ದಾರೆ..
ಎಳಜಿತ್ ಗ್ರಾಮದ ಹುಲ್ಕಡಿಕೆಯಿಂದ ಕೊಂಚ ಮುಂದೆ ಸಾಗಿದರೆ ಗುಡಿಕೇರಿ ಎನ್ನುವ ಊರಿದೆ. ಇಲ್ಲಿಗೂ ರಸ್ತೆ ಹಾಗೂ ಸೇತುವೆ ಸಂಪರ್ಕವಿಲ್ಲ. ಇಲ್ಲಿನ ನಿವಾಸಿಗಳಾದ ಸುರೇಶ್ ಮರಾಠಿ-ಸುಜಾತ ದಂಪತಿಗಳ 12 ವರ್ಷದ ಗಂಡು, 10 ವರ್ಷದ ಹೆಣ್ಮಗಳು ವಿಕಲಚೇತನರಾಗಿದ್ದು ನಿತ್ಯ ಬೆಳಿಗ್ಗೆ 9 ಗಂಟೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸುರೇಶ್ ಶಾಲೆಗೆ ಬಿಡಬೇಕು. ಮಕ್ಕಳೊಂದಿಗೆ ಸುಜಾತಾ ಸಂಜೆ 4 ಗಂಟೆವರೆಗೆ ಇರಲಿದ್ದು ವಾಪಾಸ್ ಸುರೇಶ್ ಅವರನ್ನು ಕರೆತರಬೇಕು. ಹೀಗಾಗಿ ಸುರೇಶ್ ಅವರು ಕೆಲಸಕ್ಕೆ ಹೋಗಲು ಕೂಡ ಸಮಸ್ಯೆಯಾಗುತ್ತಿದೆ. ವಿಶೇಷ ಚೇತನ ಮಕ್ಕಳಿಗೆ ಸಿಗಬೇಕಾದ ಸೌಕರ್ಯದ ಜೊತೆಗೆ ಹುಲ್ಕಡಿಕೆಯಿಂದ ಗುಡಿಕೇರಿ ತನಕ 1 ಕಿ.ಮೀ ರಸ್ತೆ ಹಾಗೂ ಇಲ್ಲಿನ ಒಂದು ಸೇತುವೆ ನಿರ್ಮಾಣವಾದಲ್ಲಿ ಈ ಕುಟುಂಬಕ್ಕೆ ಆಸರೆಯಾದಂತಾಗುತ್ತದೆ.

Comments are closed.