ಕರ್ನಾಟಕ

ಕೆರೆಯಲ್ಲಿ ಮುಳುಗಿ ಸಂಸದ ಬಿ.ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಮೃತ್ಯು

Pinterest LinkedIn Tumblr

ರಾಮನಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ. ಪ್ರಸನ್ನ ಭಟ್ (26) ಮೃತ ಯುವಕ.

ಜನವರಿ 1 ರಂದು ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಮೃತ ಪ್ರಸನ್ನ ಭಟ್ ಅವರು ಮಾವತ್ತೂರು‌ ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ‌. ಕನಕಪುರ ಗಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ‌ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಶಿಕ್ಷಣದ ಬಳಿಕ ಪತ್ರಕರ್ತನಾಗಿದ್ದ ಪ್ರಸನ್ನ ಭಟ್ ಫೋಟೋಗ್ರಫಿ, ವಿಡಿಯೋಗ್ರಫಿಯಲ್ಲಿ ನಿಪುಣರಾಗಿದ್ದರು. ಬಳಿಕ ಕೆಲ ವರ್ಷದಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೊಗ್ರಾಫರ್ ಆಗಿ ಕಾರ್ಯ ನಿರ್ಹಿಸುತ್ತಿದ್ದರು. ಸಂಸದ ರಾಘವೇಂದ್ರ ಅವರ ಸಾಮಾಜಿಕ ಜಾಲತಾಣಗಳು, ಮೀಡಿಯಾ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದು ಸಂಸದ ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಆಪ್ತರಾಗಿದ್ದರು.

ಸಾಮಾಜಿಕ ಚಟುವಟಿಕೆಯಲ್ಲಿ ಮುಂದಿದ್ದ ಪ್ರಸನ್ನ ಭಟ್ ರಜೆ ಹಾಗೂ ಬಿಡುವಿನ ವೇಳೆ ಟ್ರೆಕ್ಕಿಂಗ್, ಪ್ರವಾಸಿ ತಾಣಗಳ ಭೇಟಿ, ಫೋಟೋಗ್ರಾಫಿ ಮಾಡುತ್ತಿದ್ದರು. ಬಹುತೇಕ ಒಂಟಿಯಾಗಿ ತೆರಳುವ ಪರಿಪಾಠ ಹೊಂದಿದ್ದು ರಜಾ ದಿನಗಳಲ್ಲಿ ಪ್ರವಾಸ ಹೋಗುವುದು ಇವರ ಅಭ್ಯಾಸವಾಗಿತ್ತು. ಮಾವತ್ತೂರು ಕೆರೆಯ ಬಗ್ಗೆ ಜಾಲತಾಣದ ಮೂಲಕ ತಿಳಿದುಕೊಂಡಿದ್ದ ಅವರು ಅಲ್ಲಿಗೆ ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಪ್ರಸನ್ನ ಭಟ್ ಅವರ ಅಕಾಲಿಕ ನಿಧನಕ್ಕೆ ಸಂಸದ ಬಿ.ವೈ ರಾಘವೇಂದ್ರ ಕೂಡ ಕಂಬನಿ ಮಿಡಿದಿದ್ದಾರೆ.

Comments are closed.