ಕುಂದಾಪುರ: ಗಾಂಧೀಜಿಯವರು ಹೇಳಿದಂತೆ ಗ್ರಾಮೀಣರೇ ದೇಶದ ನೈಜ ಶಕ್ತಿಯಾಗಿದ್ದು, ಹಳ್ಳಿಗರ ಉದ್ಧಾರಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ದೇಶದ ಪ್ರಗತಿಯ ಜವಾಬ್ದಾರಿಯೂ ನಮ್ಮ ಮೇಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ದೇಶದ ಬೇರೆ ಎಲ್ಲಿಯೂ ಸಿಗಲಾರದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಹೇಳಿದರು.

ಅವರು ಸೋಮವಾರ ಶ್ರೀ ವಿ.ವಿ.ವಿ. ಹೆಮ್ಮಾಡಿ, ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ಅಧೀನದ ಹೆಮ್ಮಾಡಿಯ ಜನತಾ ಸ್ವತಂತ್ರ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ – ಜನತಾ ಸಂಭ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿಂದು ವಿಪುಲ ಅವಕಾಶವಿದ್ದು, ನಿಮ್ಮ ಆಸಕ್ತಿಯನ್ನೇ ಉದ್ಯೋಗವನ್ನಾಗಿಸಿಕೊಳ್ಳುವ ಸುವರ್ಣಾವಕಾಶವಿದೆ. ಈ ಪರಿಸ್ಥಿತಿ 20-25 ವರ್ಷಗಳ ಹಿಂದೆ ಇರಲಿಲ್ಲ. ಇದರಿಂದ ನೀವು ಅದೃಷ್ಟವಂತರು. 2047 ರಲ್ಲಿ ದೇಶದ ಸ್ವಾತಂತ್ರ್ಯ ಪಡೆದು 100 ವರ್ಷವಾಗುತ್ತಿದ್ದು, ಆ ಸಂದರ್ಭದಲ್ಲಿ ದೇಶ ಹೇಗಿರಬೇಕು ಅನ್ನುವುದರ ಕನಸನ್ನು ನನಸು ಮಾಡುವವರು ನೀವೇ ಎಂದ ಅವರು, ಈ ಜನತಾ ಕಾಲೇಜು ಹೆಮ್ಮಾಡಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ, ಹೆಜ್ಜೆಗುರುತು ಮೂಡಿಸಿ, ನೂರಾರು ವಿದ್ಯಾರ್ಥಿಗಳ ಬದುಕು ರೂಪಿಸುತ್ತಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಣಿಪಾಲ ಎಂಐಟಿಯ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಎಸ್. ಮದ್ದೋಡಿ ಮಾತನಾಡಿ, ಶಾಲಾ- ಕಾಲೇಜು ದಿನಗಳು ನಿಮ್ಮ ಜೀವನದ ಅಮೃತ ಗಳಿಗೆಯ ಸಮಯ. ಇದನ್ನು ಸಂಭ್ರಮಿಸಿ. ಸಮಯವೀಗ ‘ನ್ಯಾನೋ’ ಸೆಕೆಂಡುಗಳ ವೇಗದಲ್ಲಿ ಲೆಕ್ಕ ಹಾಕಲಾಗುತ್ತಿದ್ದು, ಈ ವೇಳೆಯಲ್ಲಿ ನೂರಾರು ಅವಕಾಶಗಳಿದ್ದು, ಅದನ್ನು ಹೇಗೆ ಸದ್ವಿನಿಯೋಗಪಡಿಸಿಕೊಳ್ಳುತ್ತೀರಿ ಅನ್ನುವುದರ ಮೇಲೆ ನಿಮ್ಮ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಜನತಾ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿ ದೇವಾಡಿಗ, ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಮುಖ್ಯ ಶಿಕ್ಷಕ ಮಂಜು ಕಾಳಾವರ, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ದೇವಾಡಿಗ, ಕಟ್ಬೆಲ್ತೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ ಪುತ್ರನ್, ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಮಟ್ಟದಲ್ಲಿ ಮಿಂಚಿದ ಕ್ರೀಡಾ ಸಾಧಕರು, ಸಾಂಸ್ಕೃತಿಕ ಪ್ರತಿಭೆಗಳನ್ನು ಗೌರವಿಸಲಾಯಿತು.
ಪ್ರಾಂಶುಪಾಲ ಗಣೇಶ್ ಮೊಗವೀರ ವಾರ್ಷಿಕ ವರದಿ ಮಂಡಿಸಿ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿದರು. ಅಭಿಲಾಷ್ ಕ್ಷತ್ರೀಯ ಪರಿಚಯಿಸಿ, ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.
Comments are closed.