ಕುಂದಾಪುರ: ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ ತೆರವುಗೊಳಿಸುವ ಕಾರ್ಯ ಕೋಟೇಶ್ವರ ಗ್ರಾ.ಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು. ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.

ತಾಲೂಕಿನ ಕೋಟೇಶ್ವರ ಗ್ರಾ.ಪಂ ಎದುರಿನ ಗ್ರಾಮಕರಣಿಕರ ಕೊಠಡಿ ಹಿಂಭಾಗದಲ್ಲಿ ಈ ಬೃಹತ್ ನೀರಿನ ಟ್ಯಾಂಕ್ ಇದ್ದು 1986 ರಲ್ಲಿ ನಿರ್ಮಾಣವಾದ 2 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕಿ ಸೋರಿಕೆ ಹಂತದಲ್ಲಿದ್ದರಿಂದ ಹದಿನೈದು ವರ್ಷಗಳಿಂದ ಯಾವುದೇ ಉಪಯೋಗವೂ ಇರಲಿಲ್ಲ. ಈ ಟ್ಯಾಂಕ್ ಶಿಥೀಲಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾ.ಪಂ ಕಟ್ಟಡ ಸಹಿತ ಇತರೆ ಅಂಗಡಿಗಳಿಗೆ ಅಪಾಯ ಇದ್ದ ಕಾರಣ ಈ ಟ್ಯಾಂಕ್ ತೆರವಿನ ಬಗ್ಗೆ ಗ್ರಾ.ಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸಂಬಂದಪಟ್ಟ ಲೋಕೋಪಯೋಗಿ ಇಲಾಖೆಯಿಂದ ಸಾಮರ್ಥ್ಯ ವರದಿ ಪಡೆದು ಟ್ಯಾಂಕಿ ಕೆಡವಲು ಅ.11ಮಂಗಳವಾರ ದಿನ ನಿಗದಿ ಮಾಡಿದ್ದರು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಸಂಚಾರಿ ಠಾಣೆ, ಆರೋಗ್ಯ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಓವರ್ ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆ ಸಾಂಗವಾಗಿ ನಡೆಯಿತು.
ಸುರತ್ಕಲ್ ಮೂಲದ 15-20 ಮಂದಿ ತಂಡ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಈ ವೇಳೆ ಕುಂದಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ಪಿಡಿಒ ದಿನೇಶ್ ನಾಯ್ಕ್, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ಚಂದ್ರಮೋಹನ್, ನಾಗರಾಜ ಕಾಂಚನ್, ರಾಯ್ಸನ್ ಡಿಮೆಲ್ಲೋ, ಉದಯ್ ನಾಯಕ್, ರಾಜಶೇಖರ ಶೆಟ್ಟಿ, ರಾಜು ಮರಕಾಲ, ವಿವೇಕ್, ಸಂಚಾರಿ ಠಾಣೆ ಪಿಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿ, ಗ್ರಾ.ಪಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು.
ಕಠಿಣ ಕಾರ್ಯಾಚರಣೆ..!
ಬೃಹತ್ ಓವರ್ ಹೆಡ್ ಟ್ಯಾಂಕಿ ಒಂದು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ, ಮತ್ತೊಂದು ಭಾಗದಲ್ಲಿ ಕೋಟೇಶ್ವರ ಪೇಟೆ ಸಂಪರ್ಕದ ಯಾವಾಗಲೂ ವಾಹನಗಳು, ಜನಸಂದಣಿ ಇರುವ ಲೋಕೋಪಯೋಗಿ ರಸ್ತೆ, ಇಕ್ಕೆಲಗಳಲ್ಲಿ ಗ್ರಾಪಂ ಕಚೇರಿ, ವಿಎ ಕಚೇರಿ. ಅಂಗಡಿಗಳು, ರಿಕ್ಷಾ ನಿಲ್ದಾಣ ಮೊದಲಾದವಿತ್ತು. ಟ್ಯಾಂಕ್ ಸುತ್ತ 150 ಮೀಟರ್ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳನ್ನು ಮುಂಜಾಗೃತಾ ಕ್ರಮವಾಗಿ ಮುಚ್ಚುವಂತೆ ಗ್ರಾ.ಪಂ ಮೊದಲೇ ನೋಟಿಸ್ ನೀಡಿದ್ದು ನೀರಿನ ಟ್ಯಾಂಕನ್ನು ಹೆದ್ದಾರಿ ಕಡೆಗೆ ಬೀಳಿಸುವ ಚಿಂತನೆ ಮಾಡಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ತಂಡ ಕ್ರೇನ್, ರೋಪ್ ಮೊದಲಾದ ಸಲಕರಣೆ ಬಳಸಿ ಟ್ಯಾಂಕ್ ಕೆಡವುವ ಕಾರ್ಯಕ್ಕೆ ಮುಂದಾಗಿತ್ತು. ಟ್ಯಾಂಕ್ ಅಡಿ ಭಾಗದ ಮೂರು ಪಿಲ್ಲರ್ ಗಳನ್ನು ಒಡೆದು ಬಲಹೀನಗೊಳಿಸಿ ರೋಪ್ ಮೂಲಕ ಎಳೆದು ಬೀಳಿಸುವ ಚಿಂತನೆ ಮಾಡಲಾಗಿತ್ತು. ಇದಕ್ಕಾಗಿ ರಾ.ಹೆದ್ದಾರಿ ಸರ್ವೀಸ್ ರಸ್ತೆ ಮತ್ತು ಒಂದು ಕಡೆ ಹೆದ್ದಾರಿಯನ್ನು ಮುಚ್ಚಿ ಇನ್ನೊಂದು ರಸ್ತೆಯಲ್ಲಿ ಎರಡುಕಡೆಯ ವಾಹನ ಓಡಾಡಲು ಅನುಕೂಲ ಮಾಡಿಕೊಡಲಾಗಿತ್ತು. ಟ್ಯಾಂಕ್ ಧರೆಗೆ ಉರುಳುತ್ತಿದ್ದಂತೆಯೇ ದೂಳುಮಯ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ರಾ.ಹೆದ್ದಾರಿ ಮೇಲ್ಭಾಗದಲ್ಲಿನ ಅವಶೇಷಗಳನ್ನು ತೆರವು ಮಾಡಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸರ್ವೀಸ್ ರಸ್ತೆ ಬುಧವಾರ ಮಧ್ಯಾಹ್ನ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ.
Comments are closed.