ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟ, ‘ಮಗಳು ಜಾನಕಿ’ ಧಾರಾವಾಹಿಯ ಚಂದು ಭಾರ್ಗಿ ಪಾತ್ರಧಾರಿಯಾಗಿ ಪ್ರೇಕ್ಷಕರ ಮನ ಗೆದ್ದಿದ್ದ ನಟ ಮಂಡ್ಯ ರವಿ ನಿಧನರಾಗಿದ್ದಾರೆ.

ಈ ಬಗ್ಗೆ ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ರವಿ ಅವರು ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಬಿಜೆಎಸ್ ನಲ್ಲಿ ದಾಖಲಾಗಿದ್ದ ನಟ ರವಿ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇನ್ನು ಈ ಬಗ್ಗೆ ಫೇಸ್ಬುಕ್‌ನಲ್ಲಿ ಮಾಹಿತಿ ನೀಡಿರುವ ನಿರ್ದೇಶಕ ಸೀತರಾಮ್ ‘ಮಗಳು ಜಾನಕಿ’ಯ ‘ಚಂದು ಭಾರ್ಗಿ’ ರವಿ ಅಸ್ತಂಗತ. ಇನ್ನೂ 42..ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ..ಅತ್ಯಂತ ಆಘಾತಕಾರಿ” ಎಂದು ಬರೆದಿದ್ದಾರೆ. ನಿರ್ದೇಶಕ ಸೀತರಾಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರವಿ ಆರೋಗ್ಯ ಕೂಡ ವಿಚಾರಿಸಿದ್ದರು.
ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ: ಮಂಡ್ಯ ಮೂಲದ ನಟ ರವಿ ಅವರ ಸಂಪೂರ್ಣ ಹೆಸರು ರವಿ ಪ್ರಸಾದ್. ಖ್ಯಾತ ನಿರ್ದೇಶಕ ಟಿಎನ್ ಸೀತರಾಮ್ ಅವರ ಅನೇಕ ಧಾರಾವಾಹಿಗಳಲ್ಲಿ ರವಿ ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ ಧಾರಾವಾಹಿ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.
ನಟ ರವಿ ಅವರು ಚಿತ್ರಲೇಖ, ಮಿಂಚು, ಮುಕ್ತ ಮುಕ್ತ, ವರಲಕ್ಷ್ಮೀ ಸ್ಟೋರ್ಸ್ ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮದಲ್ಲಿ ರವಿಪ್ರಸಾದ್ ನಿರೂಪಕರಾಗಿದ್ದರು.
Comments are closed.