ಉಡುಪಿ: ಕಾರು ಹಾಗೂ ಅದರೊಳಗಿದ್ದ ಆನಂದ ದೇವಾಡಿಗ ಅವರನ್ನು ಅಮಾನುಷವಾಗಿ ಕೊಂದ ಪ್ರಕರಣದಲ್ಲಿ ಮೂರನೇ ಆರೋಪಿ ಸತೀಶ್ ದೇವಾಡಿಗ ಹಾಗೂ ನಾಲ್ಕನೇ ಆರೋಪಿ ನಿತಿನ್ ದೇವಾಡಿಗನನ್ನು ಬೈಂದೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿ ನೀಡುವಂತೆ ಕೋರಿದ್ದರು. ಅದರಂತೆ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಇನ್ನು ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರಿಗಾರ್ ಹಾಗೂ ಎರಡನೇ ಆರೋಪಿ ಶಿಲ್ಪಾ ಈಗಾಗಾಲೇ ಪೊಲೀಸರ ಕಸ್ಟಡಿಯಲ್ಲಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ಸಾಗಿದೆ. ಶನಿವಾರ ಸ್ಥಳ ಮಹಜರು ಮೊದಲಾದ ಪ್ರಕ್ರಿಯೆಗಳು ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ.
ಇನ್ನು ಸತೀಶ್ ಟೈಲರಿಂಗ್ ವೃತ್ತಿ ನಡೆಸುತ್ತಿದ್ದು ಆತನ ಅಂಗಡಿಯಲ್ಲಿಯೇ ಮಲಯಾಳಂ ಚಿತ್ರವಾದ ‘ಕುರುಪ್’ ಮಾದರಿಯಲ್ಲಿ ಕೊಲೆಮಾಡುವ ಸಂಚು ನಡೆಸಲಾಗಿತ್ತೆಂಬುದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.

ಘಟನೆ ಹಿನ್ನೆಲೆ..
60 ವರ್ಷ ಪ್ರಾಯದ ಕಾರ್ಕಳದ ಆನಂದ ದೇವಾಡಿಗ ಎನ್ನುವರನ್ನು ವಯಾಗ್ರ ಮಾತ್ರೆ ಎಂದು ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿ 52 ವರ್ಷದ ಸದಾನಂದ ಶೇರಿಗಾರ್ ಎಂಬಾತ ತನ್ನ ಗೆಳತಿ ಶಿಲ್ಪಾ ಎಂಬಾಕೆ ಜೊತೆಸೇರಿ ಫೋರ್ಡ್ ಐಕಾನ್ ಕಾರಿನಲ್ಲಿ ಬೈಂದೂರಿಗೆ ಕರೆತಂದು ಒತ್ತಿನೆಣೆ ಬಳಿ ಹೇನಬೇರು ರಸ್ತೆಯಲ್ಲಿ ಜೀವಂತವಾಗಿ ಕಾರಿನೊಳಕ್ಕೆ ಪೆಟ್ರೋಲ್ ಸುರಿದು ಸುಟ್ಟಿದ್ದರು. ಪ್ರಕರಣದಲ್ಲಿ ಸದಾನಂದ ಶೇರಿಗಾರ, ಶಿಲ್ಪಾ ಹಾಗೂ ಇವರಿಬ್ಬರು ಪರಾರಿಯಾಗಲು ಸಹಕರಿದ ಸತೀಶ್ ದೇವಾಡಿಗ ಮತ್ತು ನಿತಿನ್ ಎನ್ನುವರನ್ನು ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದರು. ಅಪರಾಧ ವಿಚಾರಕ್ಕೆ ಸಂಬಂಧಿಸಿದ ಧಾರಾವಾಹಿ, ಸಿನಿಮಾ ನೋಡುತ್ತಿದ್ದ ಸದಾನಂದ ತಾನು ಖಾಸಗಿ ಸರ್ವೇಯರ್ ಆಗಿದ್ದ ವೇಳೆ ನಡೆದ ಅಕ್ರಮದ ಪ್ರಕರಣವೊಂದರ ಅಂತಿಮ ತೀರ್ಪು ನ್ಯಾಯಾಲಯದಲ್ಲಿ ತನ್ನ ವಿರುದ್ಧವಾಗುವ ಭಯದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇನ್ನೋರ್ವನನ್ನು ತನ್ನದೇ ಕಾರಿನಲ್ಲಿ ಸುಟ್ಟು ತಾನು ಸತ್ತಂತೆ ಬಿಂಬಿಸಲು ಈ ಸಂಚು ಮಾಡಿದ್ದ.
ಇದನ್ನೂ ಓದಿರಿ:
ಬೈಂದೂರು ಹೇನಬೇರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಮೃತದೇಹ ಪತ್ತೆ, ಮುಂದುವರಿದ ತನಿಖೆ
Comments are closed.