(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ತಾಲೂಕಿನ ವತ್ತಿನೆಣೆ ಪ್ರದೇಶದ ಹೇನಬೇರು ರಸ್ತೆಯಲ್ಲಿ ಕಾರು ಹಾಗೂ ಅದರೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಸಮಾಜದೆದುರು ತನ್ನನ್ನು ಸತ್ತಂತೆ ಬಿಂಬಿಸಿಕೊಳ್ಳಲು ಮುಂದಾದ ವ್ಯಕ್ತಿಯೋರ್ವ ಇತರೆ ಮೂವರೊಂದಿಗೆ ಸೇರಿ ನಡೆಸಿದ ಸಂಚಿನಲ್ಲಿ ಅಮಾಯಕ ವ್ಯಕ್ತಿ ಬಲಿಯಾಗಿದ್ದಾನೆ. ವಯಾಗ್ರ ಎಂದು ನಂಬಿಸಿ ವ್ಯಕ್ತಿಗೆ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಕರೆದೊಯ್ದು ಜೀವಂತವಾಗಿ ಸುಟ್ಟು ಕೊಲೆ ಮಾಡಲಾಗಿದೆ.

(ಆರೋಪಿಗಳಾದ ಸದಾನಂದ, ಶಿಲ್ಪಾ, ಸತೀಶ್, ನಿತಿನ್)
ಕಾರ್ಕಳ ಮೂಲದ ಆನಂದ ದೇವಾಡಿಗ (62) ಕೊಲೆಯಾದ ವ್ಯಕ್ತಿ. ಈತ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ಕಾರ್ಕಳದ ಮಾಳ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಕೊಲೆ ಮಾಡಿ ಸುಟ್ಟವರು. ಕಾರ್ಕಳ ಪಚ್ಚನಾಡಿ ಸೂಡ ನಿವಾಸಿಗಳಾದ ಸತೀಶ್ ಆರ್. ದೇವಾಡಿಗ (50), ನಿತಿನ್ ದೇವಾಡಿಗ (40) ಕೊಲೆ ಆರೋಪಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದು ಸದ್ಯ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ. ಪ್ರಮುಖ ಆರೋಪಿಗಳಾದ ಸದಾನಂದ ಹಾಗೂ ಶಿಲ್ಪಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 5 ದಿನ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

(ಕೊಲೆಯಾದ ಆನಂದ ದೇವಾಡಿಗ)
ಘಟನೆ ಹಿನ್ನೆಲೆ..
ಬೈಂದೂರು- ಶಿರೂರು ರಾಷ್ಟ್ರೀಯ ಹೆದ್ದಾರಿ-66 ರಿಂದ ಹೇನಬೇರು ಸಂಪರ್ಕ ರಸ್ತೆಯ 250 ಮೀ ದೂರದಲ್ಲಿ ಜು.13 ಬೆಳಿಗ್ಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು ಕಾರಿನ ಹಿಂಭಾಗದ ಸೀಟಿನಲ್ಲಿ ವ್ಯಕ್ತಿಯ ಶವ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿದ್ದು ತಲೆ ಬುರುಡೆ ಮಾತ್ರ ಕಾಣಿಸುವಂತಿತ್ತು. ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬೈಂದೂರು ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು ಮೊದಲಿಗೆ ಇದೊಂದು ಆತ್ಮಹತ್ಯೆ ಎಂಬುದಾಗಿ ಕಂಡುಬಂದರೂ ಕೂಡ ಸಾಂದರ್ಭಿಕ ಅಂಶಗಳು ಇದೊಂದು ವ್ಯವಸ್ಥಿತ ಕೊಲೆ ಇರಬಹುದೆಂಬ ಶಂಕೆಗೆ ಕಾರಣವಾಗಿತ್ತು. ಕಾರಿನ ನಂಬರ್ ಪ್ಲೇಟ್, ಇಂಜಿನ್ ಹಾಗೂ ಚಾಸ್ಸಿಸ್ ನಂಬರ್ ಕೂಡ ಸುಟ್ಟು ಹೋಗಿದ್ದ ಕಾರಣ ಕೇವಲ ಇದೊಂದು ಪೋರ್ಡ್ ಕಂಪೆನಿ ಐಕಾನ್ ಕಾರು ಎಂಬುದಷ್ಟೇ ಗುರುತಿಸಲು ಸಾಧ್ಯವಾಗಿದ್ದು ಕಾರಿನ ಮಾಲಿಕನ ಪತ್ತೆ ವಿಳಂಭವಾಗಿತ್ತು. ಫೊರೆನ್ಸಿಕ್ ತಜ್ಞರು ಆಗಮಿಸಿದ ಬಳಿಕ ಚಾಲಕನ ಸೀಟ್ ಅಡಿ ಭಾಗದಲ್ಲಿದ್ದ ಚಾಸ್ಸಿಸ್ ನಂಬರ್ ಮೂಲಕ ಕಾರಿನ ಮಾಲೀಕನನ್ನು ಪತ್ತೆ ಮಾಡಲಾಗಿತ್ತು. ಕಾರು ಕಾರ್ಕಳದ ಸದಾನಂದ ಶೇರಿಗಾರ್ (52) ಎನ್ನುವಾತನ ಹೆಸರಿನಲ್ಲಿತ್ತು. ಆತನ ನಂಬರಿಗೆ ಸಂಪರ್ಕಿಸಿದಾದ ಸ್ವಿಚ್ಡ್ ಆಫ್ ಆಗಿದ್ದ ಹಿನ್ನೆಲೆ ಪೊಲೀಸರ ಅನುಮಾನ ಇನ್ನಷ್ಟು ಹೆಚ್ಚಿತ್ತು.


ಸಿಸಿ ಟಿವಿ ಪರಿಶೀಲನೆ…
ಮಂಗಳವಾರ ತಡರಾತ್ರಿ 10.30 ರ ಸುಮಾರಿಗೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಫೋರ್ಡ್ ಐಕಾನ್ ಕಾರು ಆಗಮಿಸಿರುವ ದೃಶ್ಯ ಕಂಡುಬಂದಿತ್ತು. ಅಲ್ಲದೆ ಸಾಸ್ತಾನ ಟೋಲ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ನೀಡಿರುವ ದೃಶ್ಯ ಸೆರೆಯಾಗಿತ್ತು. ಇದರಿಂದ ಕಾರಿನಲ್ಲಿ ಮಹಿಳೆಯಿದ್ದಿರುವ ವಿಷಯ ಖಾತರಿಯಾಗಿದ್ದು ಕೊಲೆಯಾಗಿದ್ದು ಮಹಿಳೆಯೋ ಅಥವಾ ಪುರುಷನೋ ಎಂಬ ನಿಟ್ಟಿನಲ್ಲಿ ತನಿಖೆ ಸಾಗಿತ್ತು. ಈ ಮದ್ಯೆ ಸದಾನಂದ ಶೇರಿಗಾರನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಪೊಲೀಸರಿಗೆ ಕೆಲವು ಪ್ರಮುಖ ಸುಳಿವುಗಳು ಪತ್ತೆಯಾಗಿತ್ತು.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ..
ಎರಡು ತಂಡಗಳೊಂದಿಗೆ ಆರೋಪಿಗಳ ಪತ್ತೆಗೆ ಪೊಲೀಸರು ಬುಧವಾರ ಬಲೆಬೀಸಿದ್ದು ಕಾರ್ಕಳಕ್ಕೂ ಪೊಲೀಸರು ತೆರಳಿದ್ದರು. ಸದಾನಂದನ ಸಂಬಂಧಿಗಳ ಬಳಿ ವಿಚಾರಿಸಿದಾಗ ಆತ ಬುಧವಾರ ಬೆಳಿಗ್ಗೆ ಕರೆ ಮಾಡಿದ್ದು ತಿಳಿದುಬಂದಿದೆ. ಸಹೋದರನಿಗೆ ಕರೆ ಮಾಡಿ ತಾನು ಕಾಣೆಯಾದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುವಂತೆ ಈತ ಹೇಳಿದ್ದ ಎನ್ನಲಾಗಿದೆ. ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಗುರುವಾರ ಬೆಳಿಗ್ಗೆ ಮೂಡುಬಿದಿರೆ ಪುಲ್ಕೇರಿ ಕ್ರಾಸ್ ಬಳಿ ಕೊಲೆ ಮಾಡಿ ಸುಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಳಿಕ ಸಹಕರಿಸಿದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆತ್ಮಹತ್ಯೆ ಡ್ರಾಮಕ್ಕೆ ಅಮಾಯಕ ಕೊಲೆ..!
ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರಿಗಾರ ಈ ಮೊದಲು ಖಾಸಗಿ ಸರ್ವೇಯರ್ ಆಗಿಕೆಲಸ ಮಾಡಿಕೊಂಡಿದ್ದು ಇದೀಗ ಕಲ್ಲು ಕ್ವಾರಿ ನಡೆಸುತ್ತಿದ್ದಾನೆ. ಸರ್ವೇಯರ್ ಆಗಿದ್ದ ವೇಳೆ ಅದಕ್ಕೆ ಸಂಬಂಧಿಸಿದಂತೆ 2019 ರಲ್ಲಿ ಸಿವಿಲ್ ವ್ಯಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೇರಿದ್ದು ಚಾರ್ಜ್ ಶೀಟಿನಲ್ಲಿ ಸದಾನಂದ ಹೆಸರು ಉಲ್ಲೇಖಿಸಲಾಗಿತ್ತೆನ್ನಲಾಗಿದೆ. ಅದರ ಅಂತಿಮ ತೀರ್ಪು ಸದ್ಯದಲ್ಲಿದ್ದು ತನಗೆ ಶಿಕ್ಷೆಯಾಗುವ ಭಯ ಈತನಲ್ಲಿತ್ತು. ಅದಕ್ಕಾಗಿ ತನ್ನದೇ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದಂತೆ ಸಾಂದರ್ಭಿಕತೆ ಸೃಷ್ಟಿಸಲು ಸಂಚು ಮಾಡಲಾಗಿದ್ದು ಇದಕ್ಕೆ ಆತನ ಪ್ರೇಯಸಿ ಶಿಲ್ಪಾ ಸಹಕಾರ ನೀಡಿದ್ದಳು. ಶಿಲ್ಪಾ ಪರಿಚಯದವರಾದ ಆನಂದ ದೇವಾಡಿಗ ಎನ್ನುವರನ್ನು ಮನೆಗೆ ಕರೆಯಿಸಿ ವಯಾಗ್ರ ಎಂದು ನಂಬಿಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿದ್ದು ಪ್ರಜ್ಞೆ ಕಳೆದುಕೊಂಡ ಅವರನ್ನು ಸದಾನಂದನ ಹಳೆ ಮಾಡೆಲ್ ಫೋರ್ಡ್ ಐಕಾನ್ ಕಾರಿನ ಹಿಂಬದಿಯಲ್ಲಿ ಕುಳ್ಳೀರಿಸಿಕೊಂಡು ಶಿಲ್ಪಾ ಹಾಗೂ ಸದಾನಂದ ಒತ್ತಿನೆಣೆಗೆ ಬಂದು ಅಲ್ಲಿಯೇ ಹೆದ್ದಾರಿ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರೆ. ಸುಮಾರು ಒಂದೂವರೆ ತಾಸು ಈ ದುಷ್ಕೃತ್ಯದ ಪ್ರಕ್ರಿಯೆ ನಡೆದಿದ್ದು ಸಂಪೂರ್ಣ ಕಾರು ಹಾಗೂ ಮೃತದೇಹ ಸುಟ್ಟು ಕರಕಲಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸತೀಶ್ ಹಾಗೂ ನಿತಿನ್ ತಂದಿದ್ದ ಎರ್ಟಿಗಾ ಕಾರಿನಲ್ಲಿ ಅಲ್ಲಿಂದ ಪರಾರಿಯಾಗುತ್ತಾರೆ. ಈ ಕೃತ್ಯಕ್ಕೆ ಮಲಯಾಳಂ ‘ಕುರುಪ್’ ಚಿತ್ರ ನೋಡಿದ್ದೇ ದುಷ್ಪ್ರೇರಣೆ ಕಾರಣ ಎಂದು ತನಿಖೆ ವೇಳೆ ತಿಳಿದುಬಂದಿದೆ.
8 ಲೀಟರ್ ಪೆಟ್ರೋಲ್ ಸುರಿದು ಬೆಂಕಿ..!
ಬುಧವಾರ ಬೆಳಿಗ್ಗೆ ಸುಟ್ಟ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು ಕೃತ್ಯನಡೆದ ಸ್ಥಳದ ಆಸುಪಾಸು ಪೆಟ್ರೋಲ್ ತುಂಬಿಸಿ ಖಾಲಿಯಾಗಿರುವ ಬಾಟಲಿ, ಕ್ಯಾನ್ ಪತ್ತೆಯಾಗಿದ್ದು, ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿತ್ತು. ಆರೋಪಿಗಳು ಬೈಲೂರು, ಆನೆಕೆರೆ ಸೇರಿ ಮೂರು ಕಡೆ ಒಟ್ಟು 8 ಲೀಟರ್ ಪೆಟ್ರೋಲ್ ಖರೀದಿಸಿದ್ದರು.
ಕಾರ್ಯಾಚರಣೆ ತಂಡ…
ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿಎಸ್ಐ ಪವನ್ ನಾಯಕ್, ಗಂಗೊಳ್ಳಿ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಸಿಬ್ಬಂದಿಗಳಾದ ಮೋಹನ ಪೂಜಾರಿ , ನಾಗೇಂದ್ರ, ಕೃಷ್ಣ ದೇವಾಡಿಗ, ಶಾಂತರಾಮ ಶೆಟ್ಟಿ, ಅಣ್ಣಪ್ಪ ಪೂಜಾರಿ, ಚಂದ್ರಶೇಖರ, ಸುಜಿತ್, ಶ್ರೀಧರ, ಪ್ರಿನ್ಸ್, ಚಾಲಕ ಚಂದ್ರಶೇಖರ್ ಸಹಕರಿಸಿದ್ದರು.
ಕಾರ್ಕಳ-ಬೈಂದೂರು ಟ್ರಾವೆಲ್ ಹಿಸ್ಟರಿ..
ಸಂಜೆ 7.30 ರ ಹೊತ್ತಿಗೆ ಆನಂದ ಅವರನ್ನು ಕೂರಿಸಿಕೊಂಡು ಸದಾನಂದ ಹಾಗೂ ಶಿಲ್ಪಾ ಕಾರಿನಲ್ಲಿ ಕಾರ್ಕಳದಿಂದ ಹೊರಡುತ್ತಾರೆ. ದಾರಿ ಮದ್ಯೆ ಮೂರು ವಿವಿಧ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಖರೀದಿ. 10.30 ಸುಮಾರಿಗೆ ಸಾಸ್ತಾನ ಟೋಲ್ ದಾಟುತ್ತಾರೆ. ಕುಂದಾಪುರ ಮಾರ್ಗವಾಗಿ ಬೈಂದೂರು-ಶಿರೂರು ಹೆದ್ದಾರಿ ಸನಿಹದ ಹೇನಬೇರು ರಸ್ತೆಯಲ್ಲಿ ಅಂದಾಜು 11.30 ರಿಂದ 1.15 ಒಳಗೆ ಕಾರು ಸುಡುತ್ತಾರೆ. ಕೊಲೆ ಆರೋಪಿಗಳು ಹಾಗೂ ಇನ್ನಿಬ್ಬರು ತಂದ ಎರ್ಟಿಗಾ ಕಾರು 2 ಗಂಟೆ ಸುಮಾರಿಗೆ ಮತ್ತದೆ ಸಾಸ್ತಾನ ಟೋಲ್ ಮೂಲಕ ತೆರಳುತ್ತದೆ.
ಆರೋಪಿ ಸದಾನಂದನ ವಿವರ:
ಸದಾನಂದ ಶೇರಿಗಾರ (52) ಮಾಳ ಮೂಲದವನಾಗಿದ್ದು ಶಿರ್ವ ಮಂಚಕಲ್ ಅಪಾರ್ಟ್ ಮೆಂಟ್ ವಾಸಿಯಾಗಿದ್ದು ಕಲ್ಲುಕೋರೆ ವ್ಯವಹಾರ ಮಾಡಿಕೊಂಡಿದ್ದಾನೆ. ಈತ 2013 ರಿಂದ 2018 ರತನಕ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ. ಅ ವೇಳೆ ಜಾಗದ ಸರ್ವೇ ನಡೆಸಿ ಎಫ್.ಎಂ.ಬಿ. ನಕ್ಷೆಯಲ್ಲಿ ರಸ್ತೆ ಇರುವ ಬಗ್ಗೆ ವರದಿ ನೀಡಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 69/2019 ಕಲಂ 192, 420, 465, 466, 468, 471 ಐಪಿಸಿಯಡಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿ ಆರೋಪಿ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಆರೋಪಿ ಮೇಲೆ ವಾರೆಂಟ್ ಹೊರಡಿಸಲಾಗಿತ್ತು.
Comments are closed.