ಕರಾವಳಿ

ಕೇರಳ, ಕರ್ನಾಟಕದ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ನಟೋರಿಯಸ್ ಆರೋಪಿಗಳ ಬಂಧನ

Pinterest LinkedIn Tumblr

ಪುತ್ತೂರು: ಕೇರಳ ಮತ್ತು ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅಶ್ರಫ್ ಯಾನೆ ಮನ್ಸೂರ್(42) ಮತ್ತು ಸಾಲ್ಮರ ಕೆರೆಮೂಲೆ ಗುಂಪಕಲ್ಲು ನಿವಾಸಿ ಮಹಮ್ಮದ್ ಸಲಾಂ(32) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್‍ಟಾಪ್, ಸಿಸಿ ಕ್ಯಾಮರ ಡಿವಿಆರ್ ಮತ್ತು ಕಳ್ಳತನಕ್ಕೆ ಬಳಸಿದ ಬೈಕ್ ಸೇರಿದಂತೆ ಒಟ್ಟು ರೂ. 6.5ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಫೆ.26ರಂದು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಉಜ್ರುಪಾದೆ ನಿವಾಸಿ ಶಿವಪ್ರಸಾದ್ ಣಟ್ ಅವರ ಮನೆಯ ಬೀಗವನ್ನು ರಾತ್ರಿ ವೇಳೆ ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳವು ನಡೆಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಮಹಮ್ಮದ್ ಅಲಿ ಎಂಬವರ ಮನೆಯಿಂದ, ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನದಿಂದ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿಯಿಂದ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ, ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳದಲ್ಲಿ ಎರಡು ಮನೆಗಳ ಕಳ್ಳತನ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳ ವಿರುದ್ದ ಉಪ್ಪಿನಂಗಡಿ, ಸುಳ್ಯ, ಪುತ್ತೂರು ನಗರ, ಬೆಳ್ಳಾರೆ, ಬಂಟ್ವಾಳ, ಧರ್ಮಸ್ಥಳ, ವಿಟ್ಲ, ಕೇರಳದ ಮಲಪುರಂ, ಕೊಂಡೆಟ್ಟಿ, ಆದೂರು, ಕೊಡಗಿನ ಸೋಮವಾರ ಪೇಟೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಇವರ ವಿರುದ್ದ ವಾರಂಟ್ ಜಾರಿಗೊಳಿಸಲಾಗಿತ್ತು.

ಅಂತರಾಜ್ಯ ಮಟ್ಟದ ಈ ಪ್ರಕರಣವನ್ನು ಬೇಧಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್‍ಪಿ ಡಾ. ಗಾನ ಪಿ. ಕುಮಾರ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಯು, ಸಂಪ್ಯ ಪೊಲೀಸ್ ಠಾಣೆಯ ಎಸ್‍ಐ ಉದಯ ರವಿ, ಎಎಸ್‍ಐ ಅಮೀನ್ ಸಾಬ್ ಅತ್ತಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.