ಕರಾವಳಿ

ಕುಂದಾಪುರದ ಗೋಪಾಡಿಯಲ್ಲಿ ಬೆಚ್ಚಿಬೀಳಿಸುವ ಘಟನೆ; ಕೈ ಕೊಡಲಿಯಿಂದ ಕೊಚ್ಚಿ ತಂದೆಯನ್ನೇ ಕೊಂದ ಮಗ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯನ್ನು ಕೈಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಪಡುಗೋಪಾಡಿ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ.

 

ಪಡುಗೋಪಾಡಿ ಬಳಿ ನಿವಾಸಿ ನರಸಿಂಹ ಮೊಗವೀರ(72) ಕೊಲೆಯಾದವರು. ಆರೋಪಿ ಪುತ್ರನನ್ನು ರಾಘವೇಂದ್ರ (36) ಎನ್ನುವವನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:
ಗ್ಯಾರೇಜ್ ಇಟ್ಟುಕೊಂಡಿದ್ದ ರಾಘವೇಂದ್ರ ಅವಿವಾಹಿತನಾಗಿದ್ದ. ನರಸಿಂಹ- ಮೂಕ ದಂಪತಿಗಳ ಐವರು ಮಕ್ಕಳಲ್ಲಿ ಕಿರಿಯವನಾದ ಈತ ಇತ್ತೀಚೆಗೆ ಮನೆಯವರ ಬಳಿ ಆಸ್ತಿ ಪಾಲಿನ ವಿಚಾರದಲ್ಲಿ ಆಗ್ಗಾಗ್ಗೆ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿಯೂ ಕೂಡ ಕ್ಷುಲ್ಲಕ ವಿಚಾರದಲ್ಲಿ ತಂದೆಯ ಜೊತೆಗೆ ಜಗಳಕ್ಕಿಳಿದ ರಾಘವೇಂದ್ರ ಹಿಂದಿನಿಂದ ಬೆನ್ನಿಗೆ ಕಡಿದು ಬಳಿಕ ತಲೆ ಹಾಗೂ ಮುಖದ ಭಾಗಕ್ಕೆ ಕೈ ಕೊಡಲಿ ಯಿಂದ ಕಡಿದಿದ್ದಾ‌ನೆ. ಗಂಭೀರ ಗಾಯಗೊಂಡ ನರಸಿಂಹ ಅವರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ ಕೊಂಡೊಯ್ಯಲಾಯಿತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕೃತ್ಯ ತಡೆಯಲು ಬಂದ ಸಹೋದರಿಯಾದ ಸುಜಾತ ಎನ್ನುವರನ್ನು ಕಡಿದಿದ್ದು ಗಾಯಗೊಂಡ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಲೆ ಬಳಿಕ ಮನೆ ಸಮೀಪವೇ ಇದ್ದ ಆರೋಪಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.