ಕರಾವಳಿ

ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಕೋಟ ಜೋಡಿ ಕೊಲೆ ಪ್ರಕರಣ; ಜ.4 ರಿಂದ ವಿಚಾರಣೆ ಆರಂಭ

Pinterest LinkedIn Tumblr

ಉಡುಪಿ: ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ವಿಚಾರಣೆ ಇಲ್ಲಿನ ನ್ಯಾಯಾಲಯದಲ್ಲಿ ಜ.4 ರಿಂದ ಆರಂಭವಾಗಲಿದೆ. ಅವಳಿ ಕೊಲೆ ಪ್ರಕರಣದ ವಿಚಾರಣೆಯನ್ನು ಮುಂದಿನ ಆರು ತಿಂಗಳೊಳಗೆ ಮುಗಿಸುವಂತೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ ಮಹೇಶ್ವರಿ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಜನವರಿ ನಾಲ್ಕರಿಂದ ವಿಚಾರಣೆ ಆರಂಭವಾಗಲಿದ್ದು ಜನವರಿ 4, 5 ಮತ್ತು 7ರಂದು ವಿಚಾರಣೆಗೆ ಹಾಜರಾಗುವಂತೆ 10 ಮಂದಿಗೆ ಸಮನ್ಸ್ ಜಾರಿಯಾಗಿದೆ. ಮಾರ್ಚ್ ವೇಳೆಗೆ ವಿಚಾರಣೆ ಮುಗಿಯುವ ಸಾಧ್ಯತೆ ಇದೆ.

2019 ರ ಜ.26 ರಾತ್ರಿ ಮಣೂರು -ಚಿಕ್ಕನಕೆರೆಯಲ್ಲಿ ಶೌಚಾಲಯದ ಗುಂಡಿ ನಿರ್ಮಿಸುವ ವಿಚಾರದಲ್ಲಿ ತಕರಾರು ನಡೆದು ಯತೀಶ್ ಕಾಂಚನ್ ಹಾಗೂ ಕೋಟ ಬಾರಿಕೆರೆ ನಿವಾಸಿ ಭರತ್ ಶ್ರೀಯಾನ್ ಹತ್ಯೆಗೆ ಕಾರಣವಾಗಿತ್ತು.

ಪ್ರಕರಣ ಸಂಬಂಧ ಒಟ್ಟು 18 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ಆರೋಪಿಗಳಲ್ಲಿ ಓರ್ವನಾದ, ಜಿ.ಪಂ. ಮಾಜಿ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಒಂದು ವೇಳೆ ಇನ್ನು 6 ತಿಂಗಳಲ್ಲಿ ಪ್ರಕರಣದ ಅರ್ಜಿ ವಿಚಾರಣೆ ಪೂರ್ಣಗೊಳ್ಳದೇ ಇದ್ದಲ್ಲಿ, ಮತ್ತೆ ಜಾಮೀನಿಗೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎನ್ನುವುದಾಗಿ ಆದೇಶದಲ್ಲಿ ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾಲಮಿತಿಯಲ್ಲಿ ವಿಚಾರಣೆದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ.

Comments are closed.