ಕೋಲಾರ: ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ (97) ಅವರು ಶುಕ್ರವಾರ ಕೊನೆಯುಸಿರೆಳೆದರು.

ವಯೋಸಹಜ ಆರೋಗ್ಯ ಸಮಸ್ಯೆ, ಮೂತ್ರಪಿಂಡ ವೈಫಲ್ಯ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.9ರಂದು ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ದಿನದಿಂದ ದಿನಕ್ಕೆ ಅವರ ದೇಹಸ್ಥಿತಿ ಗಂಭೀರವಾಗಿ ರಾತ್ರಿ 7.30ಕ್ಕೆ ನಿಧನರಾದರು.
ಫೆಬ್ರುವರಿ ತಿಂಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಜಾಲಪ್ಪ ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರಿಗೆ 2 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ನಂತರ ಚೇತರಿಸಿಕೊಂಡಿದ್ದರು. ಹಿಂದಿನ ವರ್ಷ ಕೋವಿಡ್ 2ನೇ ಅಲೆಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನುಕುಂಟೆ ಗ್ರಾಮದ ಲಕ್ಷ್ಮೀನಾರಾಯಣಪ್ಪ ಮತ್ತು ನರಸಮ್ಮ ದಂಪತಿಯ ಮಗನಾಗಿ 1925ರ ಅ.19ರಂದು ಜನಿಸಿದ ಜಾಲಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಳ್ಳಿಯಲ್ಲೇ ಮುಗಿಸಿದರು. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮಹಾರಾಜ ಕಾಲೇಜಿನಲ್ಲಿ ಇವರ ಒಡನಾಡಿಯಾಗಿದ್ದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಮೃತರ ಪಾರ್ಥಿವ ಶರೀರವನ್ನು ಶನಿವಾರ (ಡಿ.18) ಸಾರ್ವಜನಿಕ ದರ್ಶನಕ್ಕೆ ಇಟ್ಟು ಬಳಿಕ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಪುತ್ರ ತಿಳಿಸಿದ್ದಾರೆ.
Comments are closed.