ಬೆಂಗಳೂರು/ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಹಾಗೂ ಸದಸ್ಯ ಸ್ಥಾನದಲ್ಲಿ ಗಣೇಶ್ ಕಿಣಿ ಯಥಾ ಪ್ರಕಾರ ಮುಂದುವರಿಯಬಹುದೆಂದು ಹೈಕೋರ್ಟ್ ಆದೇಶಿಸಿದೆ.

ಇವರಿಬ್ಬರು ಸಮಿತಿಯ ಸಭೆ ಹಾಗೂ ದೈನಂದಿನ ಚಟುವಟಿಕೆಗಳನ್ನು ನಡೆಸಬಹುದು. ಆದರೆ, ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಮತದಾನ ಮಾಡುವಂತಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

(ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ)
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರನ್ನಾಗಿ ಮತ್ತು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದನ್ನು ಅಸಿಂಧುಗೊಳಿಸಿ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಚಂದ್ರಶೇಖರ್ ಶೆಟ್ಟಿ ಹಾಗೂ ಗಣೇಶ್ ಕಿಣಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಗುರುವಾರ ತಡೆಯಾಜ್ಞೆ ನೀಡಿದೆ.

ನಡೆದಿದ್ದೇನು..?
2020ರ ಅಕ್ಟೋಬರ್ 27ರಂದು ಚಂದ್ರಶೇಖರ್ ಶೆಟ್ಟಿ ಕೆರಾಡಿ, ಗಣೇಶ್ ಕಿಣಿ ಬೆಳ್ವೆ ಸೇರಿದಂತೆ 9 ಮಂದಿಯನ್ನು ಉಡುಪಿಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಧಾರ್ಮಿಕ ಪರಿಷತ್ತು ಆದೇಶಿಸಿತ್ತು. ವ್ಯವಸ್ಥಾಪನ ಸಮಿತಿ ಸರ್ವ ಸದಸ್ಯರ ಸಭೆ ಕರೆಯದೇ ಕೆಲವು ತಿಂಗಳುಗಾಳದ್ದರಿಂದ ಈ ಬಗ್ಗೆ ನೊಂದ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಅವರು 2021ರ ಮಾ.24ರಂದು ಗಣೇಶ್ ಕಿಣಿ ಹಾಗೂ ಏ.15ರಂದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಂದುವರಿದ ಬೆಳವಣಿಗೆಯಲ್ಲಿ ಏ.26ರಂದು ನಡೆದ ವ್ಯವಸ್ಥಾಪನಾ ಸಭೆ ನಡೆದಿದ್ದು ಇವರಿಬ್ಬರು ಭಾಗವಹಿಸಿದ್ದರು. ಈ ಸಭೆಯಲ್ಲಿ ಸದಸ್ಯರ ಮತದಾನದ ಮೇರೆಗೆ ಚಂದ್ರಶೇಖರ ಶೆಟ್ಟಿ ಅವರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
ಈ ಕ್ರಮವನ್ನು ಪ್ರಶ್ನಿಸಿ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲಕೃಷ್ಣ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಚಂದ್ರಶೇಖರ ಶೆಟ್ಟಿ ಅವರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಸಮಿತಿ ಸಭೆಯ ನಡಾವಳಿಯನ್ನು ರದ್ದುಪಡಿಸಿತ್ತು. ಇದರಿಂದಾಗಿ ಅಧ್ಯಕ್ಷ ಹುದ್ದೆ ಕಳೆದುಕೊಂಡ ಚಂದ್ರಶೇಖರ ಶೆಟ್ಟಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.