(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ಕರಾವಳಿ ಜನತೆಯ ಹಾಗೂ ಮೀನುಗಾರರ ಆರಾಧ್ಯ ದೇವತೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮನ್ಮಹಾರಥೋತ್ಸವವು ಸಂಭ್ರಮ ಸಡಗರದಿಂದ ನ.20 ಶನಿವಾರದಂದು ನಡೆಯಿತು.

ಸಮುದ್ರ ತಟದಲ್ಲಿ ಉದ್ಬವಿಸಿ ಸುಮನಾ ನದಿಯ ಎಡದಂಡೆಯಲ್ಲಿ ನೆಲೆನಿಂತ ಶ್ರೀ ದುರ್ಗಾಮಾತೆಯ ಜಾತ್ರೆಯಲ್ಲಿ ಊರಿನ ಭಕ್ತಾಧಿಗಳು ಭಾಗವಹಿಸಿ ಅಮ್ಮನವರ ದರುಶನ ಪಡೆದಿದ್ದು ಮಳೆಯ ಹಿನ್ನಲೆಯಲ್ಲಿ ಜನ ಸಂಖ್ಯೆ ಅತೀ ವಿರಳವಾಗಿತ್ತು. ಪರಶುರಾಮ ಸೃಷ್ಟಿಯ ಸಮುದ್ರ ತೀರದಲ್ಲಿ ನೆಲೆಸಿರುವ ಆದಿಶಕ್ತಿಯ ಪ್ರತೀಕವಾಗಿರುವ ಶಕ್ತಿ ಸ್ವರೂಪಿಣಿಗೆ ಪೂಜೆ ಸಲ್ಲಿಸಲು ಮುಂಜಾನೆ ಸಮಯದಲ್ಲಿ ನವ ಜೋಡಿಗಳು ಸೇರಿದಂತೆ, ಭಕ್ತಾಧಿಗಳು ಆಗಮಿಸಿ ದೇವಿಯ ದರುಶನ ಪಡೆದು, ಹಣ್ಣು ಕಾಯಿ ಸೇವೆ ಸಲ್ಲಿಸಿ ಕೃತಾರ್ಥರಾದರು.
ಬೆಳಗ್ಗೆಯಿಂದಲೇ ಮಹಾಪೂಜೆ, ರಥಾರೋಹಣ ವಿಧಾನಗಳು ತಂತ್ರಿಗಳು, ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿತು. ಊರಿನ ಭಕ್ತಾಧಿಗಳು ಆಗಮಿಸಿ ಶ್ರೀ ದುರ್ಗಾಮಾತೆಯ ದರುಶನ ಪಡೆದು ಇಷ್ಟಾರ್ಥಗಳನ್ನು ಪೊರೈಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ತಹಶಿಲ್ದಾರ್, ದೇವಸ್ಥಾನದ ಆಡಳಿತಾಧಿಕಾರಿ ಶೋಭಾ ಲಕ್ಷ್ಮೀ ಎಚ್.ಎಸ್., ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗಣೇಶ ಗೌಡ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಗುರುರಾಜ ಪಂಜು ಪೂಜಾರಿ, ಶರತ್ ಶೆಟ್ಟಿ ಉಪ್ಪುಂದ, ಮಾಜಿ ಜಿ.ಪಂ ಸದಸ್ಯರಾದ ಸುರೇಶ ಬಟವಾಡಿ, ಮಾಜಿ ತಾ.ಪಂ ಸದಸ್ಯ ಜಗದೀಶ್ ದೇವಾಡಿಗ, ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಮೀನುಗಾರ ಮುಖಂಡ ಆನಂದ ಖಾರ್ವಿ ಮೊದಲಾದವರು ಉತ್ಸವದಲ್ಲಿ ಭಾಗವಹಿಸಿದ್ದರು.
ಇನ್ನು ಮಧ್ಯಾಹ್ನ ರಥೋತ್ಸವದ ಸಂದರ್ಭ ಮಳೆ ಬಂದಿದ್ದು ಒಂದಷ್ಟು ಗಲಿಬಿಲಿ ಉಂಟಾಯಿತು. ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ, ಬೈಂದೂರು ಪಿಎಸ್ಐ ಪವನ್ ನಾಯಕ್, ಕೊಲ್ಲೂರು ಪಿಎಸ್ಐ ನಾಸೀರ್ ಹುಸೇನ್ ಹಾಗೂ ವಿವಿಧ ಠಾಣೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
Comments are closed.