ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ 500 ರೂ., 1,000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ ಐದು ವರ್ಷವಾಗಿದೆ. ನೋಟ್ ಬ್ಯಾನ್ ಮಾಡಿದಮೇಲೆ 2,000 ರೂಪಾಯಿಯ ಹೊಸ ನೋಟುಗಳನ್ನು ಸರ್ಕಾರ ಚಲಾವಣೆಗೆ ತಂದಿತ್ತು. 500 ರೂಪಾಯಿಯ ಹೊಸ ಸರಣಿಯ ನೋಟುಗಳನ್ನು ಅರ್ಥವ್ಯವಸ್ಥೆಗೆ ಸೇರಿಸಲಾಗಿತ್ತು.

ಇದಾದ ಕೆಲ ತಿಂಗಳ ಬಳಿಕ 200 ರೂಪಾಯಿ ಮುಖಬೆಲೆಯ ನೋಟುಗಳನ್ನೂ ಪರಿಚಯಿಸಿತ್ತು. ಇದೆಲ್ಲ ಆಗಿ ಐದು ವರ್ಷಗಳಾಗಿದ್ದು, ನಗದು ವಹಿವಾಟಿನಂತೆಯೇ ಡಿಜಿಟಲ್ ಪಾವತಿಯು ಕೂಡ ವೇಗವಾಗಿ ಏರಿಕೆಯಾಗಿದೆ. ಯುಪಿಐ, ನೆಟ್ಬ್ಯಾಂಕಿಂಗ್, ಪ್ಲಾಸ್ಟಿಕ್ ಕಾರ್ಡ್ ಸೇರಿ ಡಿಜಿಟಲ್ ಪಾವತಿಯೇ ಹೆಚ್ಚು ಚಾಲ್ತಿಯಲ್ಲಿದೆ. ಆರ್ಬಿಐ ಡೇಟಾ ಪ್ರಕಾರ, 2016ರ ನವೆಂಬರ್ 4ರ ಪ್ರಕಾರ ದೇಶದ ಅರ್ಥವ್ಯವಸ್ಥೆಯಲ್ಲಿ 17.74 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. 2021ರ ಅಕ್ಟೋಬರ್ 29ರ ಪ್ರಕಾರ 29.17 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಯುಪಿಐ 2016ರಲ್ಲಿ ಚಾಲ್ತಿಗೆ ಬಂದಿದ್ದು, 2021ರ ಅಕ್ಟೋಬರ್ ತಿಂಗಳ ಪ್ರಕಾರ, 421 ಕೋಟಿ ವಹಿವಾಟು ನಡೆದಿದ್ದು, ಇದರ ಮೌಲ್ಯ 7.71 ಲಕ್ಷ ಕೋಟಿ ರೂ. ಆಗಿತ್ತು.
ಈ ವರ್ಷದ ಮಾರ್ಚ್ 31ರ ಡೇಟಾ ಪ್ರಕಾರ, ನೋಟುಗಳ ಮೌಲ್ಯದ ಲೆಕ್ಕಾಚಾರದಲ್ಲಿ 500 ರೂ. ಮತ್ತು 2,000 ರೂಪಾಯಿ ಮೌಲ್ಯದನೋಟುಗಳು ಒಟ್ಟು ಶೇಕಡ 85.7 ಪಾಲು ಹೊಂದಿವೆ. ಕಳೆದ ವರ್ಷ ಮಾರ್ಚ್ 31ರ ವೇಳೆಗೆ ಇದು 83.4% ಇತ್ತು.
Comments are closed.