ಕರಾವಳಿ

ಬಂಟ್ವಾಳದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ಮೂವರ ಬಂಧನ

Pinterest LinkedIn Tumblr

ಬಂಟ್ವಾಳ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ರಿಕ್ಷಾ ಚಾಲಕ ರಿಜ್ವಾನ್‌, ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಬಂಧಿತ ಆರೋಪಿಗಳು.

ನವೆಂಬರ್‌ 4ರಂದು ಬಂಟ್ವಾಳ ತಾಲೂಕಿನ ಮಹಿಳೆಯೋರ್ವರು ಠಾಣೆಗೆ ಬಂದು ತನ್ನ ಮಗಳಿಗೆ ಫರಂಗೀಪೇಟೆಯ ರಿಕ್ಷಾ ಚಾಲಕ ಲೈಂಗಿಕ ಶೋಷಣೆ ಮಾಡಿರುವುದಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ರಿಕ್ಷಾ ಚಾಲಕ ರಿಜ್ವಾನ್‌ ಎಂಬಾತನನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಅದೇ ಬಾಲಕಿ ನವೆಂಬರ್‌ 5 ರಂದು ಬಂದು ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರು ನೀಡಿದ್ದು ಅದರಂತೆ ಪೋಕ್ಸೊ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಪ್ರಕರಣ ದಾಖಲಾದ ಕೂಡಲೇ ಚುರುಕಾಗಿ ತನಿಖೆ ನಡೆಸಿದ ತನಿಖಾ ತಂಡವು ಪೊಲೀಸ್‌ ಅಧೀಕ್ಷಕ ಋಷಿಕೇಶ್‌ ಸೋನವಾನೆ ಭಗವಾನ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಡಾ/ ಶಿವಕುಮಾರ್‌ ಗುಣಾರೆ ರವರ ನಿರ್ದೇಶನದಂತೆ ಬಂಟ್ವಾಳ ಉಪವಿಭಾಗದ ಶಿವಾಂಶು ರಜಪೂತ್‌ ಐ.ಪಿ.ಎಸ್‌ ರವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಟಿ.ಡಿ ನಾಗರಾಜ್‌, ಮಹಿಳಾ ಪಿ.ಎಸ್‌.ಐ ಭಾರತಿ, ಪ್ರೊಬೇಶನರಿ ಪಿ.ಎಸ್.ಐ.ಗಳಾದ ರಾಮಕೃಷ್ಣ, ವೀಣಾ ರಾಮಚಂದ್ರ, ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿಯವರಾದ ಜನಾರ್ಧನ, ಸುರೇಶ್‌, ಪುನೀತ್‌, ಮನೋಜ್ ಕುಮಾರ್ ,ಲೋಲಾಕ್ಷಿ, ವಿಶಾಲಾಕ್ಷಿ ಮೊದಲಾದವರ ತನಿಖಾ ತಂಡವು ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ಕ್ಷಿಪ್ರ ತನಿಖೆ ಮತ್ತು ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪ್ರಶಂಸಿಸಿದ್ದಾರೆ.

Comments are closed.