ಕರ್ನಾಟಕ

60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನೀವು ಯಾವ ದಲಿತರನ್ನು ಉದ್ಧಾರ ಮಾಡಿದಿರಿ?: ಸಿದ್ದರಾಮಯ್ಯಗೆ ಸಿ.ಟಿ ರವಿ ಪ್ರಶ್ನೆ

Pinterest LinkedIn Tumblr

ಬೆಂಗಳೂರು: ‘ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಸೇರುತ್ತಿದ್ದಾರೆʼ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನರ ಹೇಳಿಕೆ ಅವರಿಗೆ ದಲಿತ ನಾಯಕರ ಬಗ್ಗೆ ಇಷ್ಟೊಂದು ಅಸಮಾಧಾನವಿದೆ ಎಂಬುದನ್ನು ತಿಳಿಸುತ್ತಿದೆ ಎಂದು ಬಿಜೆಪಿ‌ ಮುಖಂಡ ಸಿ.ಟಿ ರವಿ ಹೇಳಿದ್ದಾರೆ.

ಸಿದ್ದರಾಮಯ್ಯವರೇ ನಿಮ್ಮ ಸಮಕಾಲಿನ ದಲಿತ ರಾಜಕೀಯ ನಾಯಕರುಗಳ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುತ್ತೀರಿ ಎಂದು ಭಾವಿಸಿರಲಿಲ್ಲ. ನೀವು ಹೇಳಿದಂತೆ ನಿಮ್ಮ ಸಮಕಾಲೀನರು ಸಿದ್ದಾಂತ ತೊರೆದು ಜೀವಿಸಿಲ್ಲ. ಅಂತಹ ದಲಿತ ನಾಯಕರು ಬಿಜೆಪಿಗೆ ಬಂದಿದ್ದು ಜನತಾ ಪರಿವಾರದ ಸಿದ್ದಾಂತ & ನಂಬಿಕೆಯಿಂದ ಮಾತ್ರ. ನಿಮ್ಮಹಾಗೆ ಅಧಿಕಾರದ ಲಾಲಸೆಗೆ ಅವರು ಪಕ್ಷ ತೊರೆದವರಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದಾಗ ಬಿಜೆಪಿ ಸೇರಿದ ಇವರಿಗೆ ಪಕ್ಷದ ತತ್ವ ಸಿದ್ದಾಂತ ಮತ್ತು ನಿಮ್ನ ವರ್ಗದ ಮೇಲೆ ಅವರಿಗೆ ಅಪಾರ ಕಾಳಜಿಯಿಂದಲೆ ಪಕ್ಷ ಸೇರಿದ್ದಾರೆ.

ನಿಮ್ಮ ಸಮಕಾಲೀನ ನಾಯಕರಾದ ಶ್ರೀ ರಮೇಶ್ ಜಿಗಜಿಣಗಿ, ಶ್ರೀ ಗೋವಿಂದ ಕಾರಜೋಳರಂತಹ ನಾಯಕರು ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಹೇಗೆ ದಲಿತೊದ್ಧಾರದಲ್ಲಿ ತೊಡಗಿದ್ದಾರೆ ಮತ್ತು ಎಲ್ಲರ ವಿಶ್ವಾಸಗಳಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಇಡೀ ಕರ್ನಾಟಕ, ದೇಶದ ಜನರಿಗೆ ಗೊತ್ತು. ಅಂತವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಲ್ಲ ಇದೇನಾ ನಿಮ್ಮ ದಲಿತಪರ ಕಾಳಜಿ? ದಲಿತರ ಬಗ್ಗೆ ಬಲಿತವರಾದ ನಿಮ್ಮ ವಾಸ್ತವತೆ ತಿಳಿಯಿತು.

ನಿಮ್ಮನ್ನು ರಾಜಕೀಯವಾಗಿ ಬೆಳಸಿದ ಪಕ್ಷವನ್ನೇ ನೀವು ʼಹತ್ತಿದ ಏಣಿʼಯಂತೆ ಒದ್ದು ಹೊರಬಂದ ನಂತರ ಹೀನಾ ಮಾನವಾಗಿ ಆ ಪಕ್ಷದ ನಾಯಕರನ್ನು ಟೀಕಿಸಿ, ಬೈದಿರಿ. ನೀವು ಆ ಸಿದ್ದಾಂತ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದು, ದಲಿತ ನಾಯಕರನ್ನು ಬಳಸಿಕೊಂಡು ಬಿಸಾಡಿದ್ದು ಯಾಕಾಗಿ ಸಿದ್ದರಾಮಯ್ಯವರೇ? ನಾವೂ ಆರೋಪಿಸಬಹುದು ಭ್ರಷ್ಟಾಚಾರ ನಡೆಸಲು! ಹೊಟ್ಟೆಪಾಡಿಗಾಗಿ ಎಂದು!!!

ನಮ್ಮ ಪಕ್ಷದ ದಲಿತ ನಾಯಕರ ಬಗ್ಗೆ ಮಾತನಾಡುವ ಮೊದಲು, ನೀವು ಸಿಎಂ ಆಗಿದ್ದಾಗ ಸಚಿವ ಶ್ರೀ ಹೆಚ್‌.ಸಿ. ಮಹಾದೇವಪ್ಪ ಅವರನ್ನು ನೀವು ಎಟಿಎಂ ಕಾರ್ಡ್‌ ಮಾಡಿಕೊಂಡಿದ್ದೀರಿ, ದಲಿತ ಸಚಿವರೊಬ್ಬರ ಮನೆಯಲ್ಲಿಯೆ ʼವಿಜಯ ಖಾತೆ’ ತೆರೆದಿದ್ದಿರಿ ಎಂದು ವಿಧಾನಸೌಧದ ಕಂಭಗಳೂ ಮಾತನಾಡುತ್ತಿದ್ದ ಬಗ್ಗೆ ಪತ್ರಿಗಳಲ್ಲಿ ವರದಿಯಾಗಿದ್ದು ನೆನಪಿದೆಯಾ ಸಿದ್ದರಾಮಯ್ಯನವರೇ?

ಸಮಾಜ ಕಲ್ಯಾಣ ಇಲಾಖೆಯ ವ್ಯವಹಾರಗಳು ಅಂತಃಪುರದಲ್ಲಿ ನಡೆಯುತ್ತಿತ್ತು ಎಂಬುದು ಇದು ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು ನೆನಪಿಲ್ಲವೇ ಸಿದ್ದರಾಮಯ್ಯನವರೇ? ನಿಮ್ಮ ರಾಜಕೀಯ ಹಿತಾಸಕ್ತಿಗೆ, ಆಕಾಂಕ್ಷೆಗಳಿಗೆ ನೀವು ಹೇಗೆ ದಲಿತ ನಾಯಕರನ್ನು ಬಳಿಸಿಕೊಂಡಿರಿ ಎಂದು ರಾಜ್ಯದ ದಲಿತ ಸಮುದಾಯಕ್ಕೂ, ಕರ್ನಾಟಕದ ಜನತೆಗೂ ಗೊತ್ತಿದೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೇಳಿದ ಮಾತು ಈಗ ನೆನಪಾಗುತ್ತಿದೆ. ʼಸರ್ಕಾರದ ಯೋಜನೆಗಳು ಕಟ್ಟ ಕಡೆಯ ಜನರಿಗೆ ತಲುಪುವುದು 15% ಮಾತ್ರ ಎಂಬ ಹೇಳಿಕೆ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ನಿಜವಾಯಿತು. ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವ ಅವರು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲಿಲ್ಲದ ಹಾವಿನಂತೆ ಮಾಡಿದವರು ಯಾರು ಎಂಬುದು ಸರ್ವವೇದ್ಯ.

“ದಲಿತೋದ್ಧಾರ”ದ ಹೆಸರಿನಲ್ಲಿ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಟ್ಟು ಕಾಂಗ್ರೆಸ್‌ ನಾಯಕರು ಹುಲ್ಲುಗಾವಲ್ಲನ್ನಾಗಿಸಿಕೊಂಡದ್ದು ಸುಳ್ಳೇ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಅದಕ್ಕೆ ರಾಜೀವ್‌ ಗಾಂಧಿ ಆ ಮಾತು ಹೇಳಿರಬೇಕು, ಇಲ್ಲವಾದರೆ ಆ ಮಾತುಗಳನ್ನು ಯಾಕೆ ಹೇಳುತ್ತಿದ್ದರು? 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನೀವು ಯಾವ ದಲಿತರನ್ನು ಉದ್ಧಾರ ಮಾಡಿದಿರಿ ಹೇಳಿ?

ದಲಿತೋದ್ಧಾರ ಅನ್ನುವುದು 60 ವರ್ಷ ಆಳ್ವಿಕೆ ಮಾಡಿದ ನಿಮ್ಮ ಪಕ್ಷದ ನಿಮ್ಮ ಅಜೆಂಡ ಮಾತ್ರ. ವಾಸ್ತವಾಗಿ ಅವರನ್ನು ಬಡತನದದಲ್ಲೇ ಉಳಿಸಿ ವೋಟ್ ಬ್ಯಾಂಕ್ ಮಾಡಿಕೊಂಡವರು ನೀವು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೂರಕ್ಕೂ ಅಧಿಕ ಯೋಜನೆಗಳ ಸಹಾಯಧನ ನೇರ ಬಡವರ ಬ್ಯಾಂಕ್‌ ಖಾತೆಗೆ ಹೋಗುತ್ತಿದೆ. ʼನಾ ಖಾವುಂಗಾ, ನಾ ಖಾನೆ ದೂಂಗಾ’ ಇದು ನಮ್ಮನೀತಿ.

ನಿಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಎಸಿಬಿ ರಚಿಸಿ ಅದನ್ನು ಕೈಗೊಂಬೆ ಮಾಡಿಕೊಂಡು,ನಿಮ್ಮ ಹಿಂಬಾಲಕರ ಹಗರಣಗಳನ್ನು ಜನರಿಗೆ ಗೊತ್ತಾಗದಂತೆ ʼಚಾಪ್ಟರ್‌ ಕ್ಲೋಸ್‌ʼ ಮಾಡಿಸಿದ್ದು ಸಿದ್ದು ಆಡಳಿತದ ʼಸಿದ್ಧ ಮಾದರಿʼಗೆ ಹಿಡಿದ ಕೈಗನ್ನಡಿ. ದಲಿತೋದ್ಧಾರ ಎಂಬ ಗುರಾಣಿ ಹಿಡಿದುಕೊಂಡು ನಿಮ್ಮ ಪಕ್ಷ ಪರ್ಸೆಂಟೇಜ್‌ ʼಭಾಗ್ಯʼ ಎಂಬ ಬೆಣ್ಣೆ ತಿಂದು ದಲಿತರ ಮುಖಕ್ಕೆ ಒರೆಸಿದ ಕೋತಿಯ ಕಥೆ ನಿಮ್ಮದು.

ಅಂದ ಹಾಗೆ, ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಖರ್ಗೆಯವರನ್ನು, ಪರಮೇಶ್ವರ್ ಅವರನ್ನು ನಿಮ್ಮ ದಾರಿಯಿಂದ ಹೇಗೆ ಬದಿಗೆ ಸರಿಸಿದಿರಿ ಅನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಇಂಥಹ ಗುಣ ಗೊತ್ತಿದ್ದೆ, ಶ್ರೀ ಚಲವಾದಿ ನಾರಾಯಣ ಸ್ವಾಮಿಯವರು ನಿಮ್ಮನ್ನು ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಎಂದಿರುವುದು ಸತ್ಯಕ್ಕೆ ಹಿಡಿದ ಕನ್ನಡಿ. ಎಂದು ಸಿ.ಟಿ ರವಿ ಹೇಳಿದರು.

Comments are closed.