ಕರಾವಳಿ

ದೇಶಕ್ಕೆ ಬೇಕಾದ, ಮಕ್ಕಳ ಸ್ಕಿಲ್ ಪ್ರೋತ್ಸಾಹಿಸುವ ಶಿಕ್ಷಣ ರಾಷ್ಟ್ರೀಯ ಶಿಕ್ಷಣದಲ್ಲಿದೆ: ಸಚಿವ ನಾಗೇಶ್

Pinterest LinkedIn Tumblr

ಕುಂದಾಪುರ: ಇಂದಿನ ಶಿಕ್ಷಣ ನೀತಿ ಬ್ರಿಟಿಷ್ ಆಡಳಿತಕ್ಕೆ ಪೂರಕವಾಗಿ ರೂಪಿಸಲಾಗಿದ್ದು, ಮಾನವೀಯ ಮೌಲ್ಯಗಳಿಂದ ದೂರವಿದ್ದು, ವೃದ್ದಾಶ್ರಮಗಳ ತೆರೆಯುವಂತೆ ಸರ್ಕಾರದ ಮೇಲೆ ಒತ್ತಡ ಬರುತ್ತಿದೆ. ಬುದ್ದಿ ಅರಳುವ, ಹೃದಯ ಹಾಗೂ ದೇಹಕ್ಕೆ ಬೇಕಾಗುವ, ಸ್ಕಿಲ್ ಗುರಿತಿಸಿ ಪ್ರೋತ್ಸಾಹಿಸುವ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತದೆ. 2022-23ರಲ್ಲಿ ಸಂಪೂರ್ಣ ಎನ್‌ಇಪಿ ಜಾರಿಯಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಬುಧವಾರ ನಡೆದ ಶಿಕ್ಷಕರೊಂದಿಗೆ ಸಂವಾದ ಉದ್ಘಾಟಿಸಿ, ಶಿಕ್ಷಕರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಇಂದಿನ ಶಿಕ್ಷಣ ನೀತಿ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ತಜ್ಞರು, ರಾಜಕೀಯ ಮುಖಂಡರು ಶಿಕ್ಷಣ ದಾರಿ ಬದಲಾವಣೆ ಬಗ್ಗೆ ಮಾತನಾಡಿದ್ದರೂ ಇದೂವರೆಗೂ ಬ್ರಿಟಿಷ್ ಆಡಳಿತಕ್ಕೆ ಒತ್ತುಕೊಡುವ ಮಖಾಲೆ ಶಿಕ್ಷಣ ನೀತಿ ಒಪ್ಪಿಕೊಂಡಿದ್ದೇವೆ. 1968ರಲ್ಲಿ ಇಂದಿರಾ ಗಾಂಧಿ ಶಿಕ್ಷಣ ಬದಲಾವಣೆಗೆ ಮುಂದಾದರೂ ಆಡಳಿತತಾತ್ಮಕ ಬದಲಾವಣೆ ಮೂಲಕ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರು. 1967ರಲ್ಲಿ ರಾಜೀವ ಗಾಂಧಿ ಶಿಕ್ಷಣ ಬದಲಾವಣೆಗೆ ಮನಸ್ಸು ಮಾಡಿದರೂ ಶಿಕ್ಷಣದ ದಾಸ್ಯದಿಂದ ಹೊರ ಬರಲಾಗಲಿಲ್ಲ. ದೇಶೀಯ ಶಿಕ್ಷಣ ಪದ್ದತಿ ಜಾರಿ ಮೂಲಕ ಮಾನವೀಯ ಕೊಂಡಿಗಳ ಬೆಸೆವ ಕೆಲಸ ಆಗಬೇಕಿದೆ ಎಂದರು.

ಎನ್‌ಇಪಿ ಶಿಕ್ಷಣದಲ್ಲಿ ವಿದ್ಯಾರ್ಥಿಗೆ ಏನು ಬೇಕೋ ಅದನ್ನು ಆಯ್ಕೆಮಾಡುವ ಅವಕಾಶವಿದೆ. ೩ ರಿಂದ ೫, ಒಂದು ಮಟ್ಟವಾದರೆ, 3,4,5,6,7,8,9,10,11 ಮಟ್ಟವಿದ್ದು, 8ನೇ ತರಗತಿ ಪ್ರಾಥಮಿಕ ಶಿಕ್ಷಣಕ್ಕೆ ಸೇರುತ್ತದೆ. ಮಕ್ಕಳ ತಜ್ಞರ ಅಭಿಪ್ರಾಯದ ಪ್ರಕಾರ 3 ರಿಂದ 6 ವರ್ಷ ಮಕ್ಕಳ ಕಲಿಕೆ ಅವಾಕಾಶವಿದ್ದು, ಅಂಗನವಾಡಿ ಉಳಿಸಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದ್ದು, ಒಂದರಿಂದ 7ನೇ ತರಗತಿ ತನಕ ಯಾವುದೇ ಪರೀಕ್ಷೆ ಇರುವುದಿಲ್ಲ ಎಂದು ಹೇಳಿದರು.

ನಮ್ಮ ಹಿಂದಿನ ಶಿಕ್ಷಣ ನೀತಿ ದೃಢವಾಗಿದ್ದರಿಂದ ಪರಕೀಯರ ದಾಳಿ ತಾಳಿ ಇದೂವರೆಗೆ ಗಟ್ಟಿಯಾಗಿ ಉಳಿದಿದೆ. ಅದಕ್ಕೆ ಗುರುಕುಲ ಪದ್ದತಿ ಶಿಕ್ಷಣ ಕಾರಣ ಎಂದ ಅವರು ಗುರುಕುಲದಲ್ಲಿ ಎಲ್ಲರಿಗೂ ಸಮಾನ ದೃಷ್ಟಿಯಲ್ಲಿ ಶಿಕ್ಷಣ ನೀಡುತ್ತಿದ್ದು, ಪರೀಕ್ಷೆಗಳಿಲ್ಲದೆ, ಜೀವನ ಕಟ್ಟಿಕೊಳ್ಳುವ ಸ್ಕಿಲ್ ಗುರತಿಸಿ ಪ್ರೀತ್ಸಾಹಿಸುವ ಶಿಕ್ಷಣ ಸಿಗುತ್ತಿದ್ದು, ಇನ್‌ಇಪಿ ಶಿಕ್ಷಣ ನೀತಿ ಕೂಡಾ ಅದನ್ನೇ ಹೇಳುತ್ತದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವವರು ಯಾರನ್ನು ಕೇಳಿ ಎನ್‌ಇಪಿ ಜಾರಿಗೆ ತರುತ್ತೀರಾ ಎಂದು ಪ್ರಶ್ನಿಸುತ್ತಾರೆ. ಆದರೆ ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಮುನ್ನಾ ಶಿಕ್ಷಣ ತಜ್ಞರು, ಅನುಭವಿಗಳ ಎಲ್ಲರನ್ನೂ ಸೇರಿಸಿ ಶಿಕ್ಷಣ ನೀತಿ ಪರಾಮರ್ಶಿಸಿ, ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ಕಮಿಟಿ ರಚಿಸಿ, ಎನ್‌ಇಪಿ ಬಗ್ಗೆ ಸೆಮಿನಾರ್, ಮಾಹಿತಿಗಳ ನೀಡಿ, ಎಲ್ಲರೂ ಹೊಸ ಶಿಕ್ಷಣ ನೀತಿ ಒಪ್ಪಿಕೊಂಡಿದ್ದರಿಂದ ಜಾರಿಗೆ ತರುತ್ತಿದ್ದು, ವಿರೋಧಿಸುವುದಕ್ಕಾಗಿ ಯಾರನ್ನೂ ಕೇಳಿಲ್ಲ ಎನ್ನೋದು ಸತ್ಯಕ್ಕೆ ದೂರವಾದ ಮಾತು ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಚಿವರ ಆಪ್ತ ಕಾರ್‍ಯದರ್ಶಿ ರವಿ, ಜಿಲ್ಲಾ ಶಿಕ್ಷಣಾಧಿಕಾರಿ ಜೆ.ಎಂ.ಮುಂದಿನಮನೆ, ಹೆಮ್ಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣ, ಬೈಂದೂರು ಕ್ಷೇತ್ರ ಶಿಕ್ಷಣಾದಿಕಾರಿ ನಾಗೇಂದ್ರಪ್ಪ, ವಿವಿಧ ಶಿಕ್ಷಕ ಸಂಘ ಅಧ್ಯಕ್ಷರಾದ ದಿನಕರ ಶೆಟ್ಟಿ, ಶೇಖರ ಪೂಜಾರಿ, ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ ಶೆಟ್ಟಿ ಮುಂತಾದವರು ಇದ್ದರು.

ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಲು ಟಿಸಿ ಕೊಡದ ಖಾಸಗಿ ಶಾಲೆಗಳ ಕುರಿತು ಪೋಷಕರು, ವಿವಿಧ ಶಿಕ್ಷಕ ಸಂಘದ ಪದಾಧಿಕಾರಿಗಳು ಸಚಿವರಿಗೆ ಬೇಡಿಕೆ ಮನವಿ ಸಲ್ಲಸಿದರು. ಹೆಮ್ಮಾಡಿ ಶಾಲಾ ಮಕ್ಕಳಿಗೆ ಬಿಸಿಯೂಟ ಕಿಟ್ ವಿತರಿಸಲಾಯಿತು. ಜಿಲ್ಲಾ ಶಿಕ್ಷಕ ಸಂಘ ಹಾಗೂ ವಿವಿಧ ಶಿಕ್ಷಕ ಸಂಘ ಸಚಿವ ಬಿ.ಸಿ.ನಾಗೇಶ್ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಸನ್ಮಾನಿಸಿದರು. ಎಸ್ಸೆಸ್‌ಎಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದು ಐದು ಮಕ್ಕಳ ಸನ್ಮಾನಿಸಲಾಯಿತು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪದ್ಮನಾಭ ಸ್ವಾಗತಿಸಿದರು. ಹಕ್ಲಾಡಿ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲಾ ಶಿಕ್ಷಕ ಡಾ.ಕಿಶೋರ್ ಶೆಟ್ಟಿ, ಶಿಕ್ಷಕ ಗಣಪತಿ ಹೋಬಳಿದಾರ್ ನಿರೂಪಿಸಿದರು. ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಟಿ.ನಾಗೂರಿ ಪ್ರಾಸ್ತಾವಿಕ ಮಾತನಾಡಿದರು.

Comments are closed.