ಮಾಧ್ಯಮ ಅಕಾಡೆಮಿಯ 40ನೇ ವರ್ಷಾಚರಣೆ : ನೂತನ ಲಾಂಚನ ಬಿಡುಗಡೆ

ಬೆಂಗಳೂರು : ಕೃಷಿ ಉತ್ಪನ್ನ ದ್ವಿಗುಣ, ಜಲ ಶಕ್ತಿಯ ಸಮರ್ಪಕ ಬಳಕೆ, ಜಿಲ್ಲಾ ಮಟ್ಟದಲ್ಲೂ ಕೈಗಾರಿಕೆಗಳ ಸ್ಥಾಪನೆ, ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಕಲ್ಪಿಸುವುದು ಹಾಗೂ ತಲಾ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಏರ್ಪಡಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ 40ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನೂತನ ಲಾಂಛನ ಬಿಡುಗಡೆ ಮತ್ತು ಕ್ಲಬ್‌ಹೌಸ್‌ಗೆ ಚಾಲನೆ ನೀಡಿದ ಅವರು ‘ನನ್ನ ಕಲ್ಪನೆಯ ಕರ್ನಾಟಕ’ ವಿಷಯದ ಬಗ್ಗೆ ಮಾತನಾಡಿ, ಶಾಸಕನಾಗಿದ್ದರೆ ಹೆಚ್ಚು ಮಾತನಾಡಬಹುದಿತ್ತು. ಮುಖ್ಯಮಂತ್ರಿ ಆಗಿರುವುದರಿಂದ ಅಷ್ಟೊಂದು ಮಾತನಾಡಲು ಆಗುವುದಿಲ್ಲ ಎಂದು ಹೇಳುತ್ತಾ ಸಂವಾದಕ್ಕೆ ಚಾಲನೆ ನೀಡಿದರು.
ನಮ್ಮಲ್ಲಿ ಅಪಾರವಾದ ಜಲಶಕ್ತಿ ಇದೆ. ಬೀದರ್‌ನಿಂದ ಕೊಳ್ಳೆಗಾಲದವರೆಗೆ ಕಾರಂಜ, ತುಂಗಭದ್ರಾ. ಘಟಪ್ರಭ, ಮಲಪ್ರಭ, ದೂಧ್ ಗಂಗಾ, ಕೃಷ್ಣಾ, ಕಾವೇರಿ, ಕಬಿನಿ ಮತ್ತಿತರ ನದಿಗಳು ಹರಿಯುತ್ತಿವೆ. ಆದರೆ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಸಂಪದ್ಭರಿತ, ಸುರಕ್ಷಿತ, ವಿಫುಲ ಅವಕಾಶವಿರುವ ಸುಂದರನಾಡು ನಮ್ಮದಾಗಬೇಕು. ಕನ್ನಡಕ್ಕೆ ಕನ್ನಡಿಗರಿಗೆ ಅಗ್ರಸ್ಥಾನ ಸಿಗುವಂತಾಗಬೇಕು ತಮ್ಮ ಕಲ್ಪನೆಯ ಕರ್ನಾಟಕವನ್ನು ತಿಳಿಸಿದರು.
ಉದ್ಯೋಗ ಕೇಂದ್ರತ ಯೋಜನೆ ಅಗತ್ಯ :
ಬೆಂಗಳೂರು ಯೋಜನಾಬದ್ಧವಾಗಿ ಬೆಳೆದಿಲ್ಲ. ಅಭಿವೃದ್ಧಿಗೆ ಹೆಚ್ಚು ಹಣಕಾಸು ಬೇಕಿದ್ದು ಆದ್ಯತೆ ನೀಡಲಾಗುವುದು.
ಬೆಂಗಳೂರಿನಲ್ಲಿ ಹೊರ ವಲಯ ಮತ್ತು ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಗೊಳಿಸಬೇಕು. ಬಂಡವಾಳ ಹೂಡಿಕೆಗಿಂತ, ಉದ್ಯೋಗ ಕೇಂದ್ರಿತ ಯೋಜನೆಗಳನ್ನು ಹೆಚ್ಚಾಗಿ ಜಾರಿಗೆ ತರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲು ಚಿಂತನೆ ನಡೆಯುತ್ತಿದೆ, ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ವಿಮಾನಯಾನ ಸೇವೆಯಲ್ಲಿಯೂ ಉತ್ತಮ ಸಂಪರ್ಕ ಏರ್ಪಡುತ್ತಿದೆ. 300 ಕಿ.ಮಿಗೂ ಅಧಿಕ ಬಂದರು ಪ್ರದೇಶವಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.
ದುಡಿಯುವ ಕೈಗೆ ಕೆಲಸ: ಆಸ್ಪತ್ರೆಗಳನ್ನು ಉನ್ನತೀಕರಣ ಮಾಡಬೇಕು. ತಲಾವಾರು ಆದಾಯ ಹೆಚ್ಚಿಸಬೇಕು. ಗ್ರಾಮೀಣ ದುಡಿಯುವ ವರ್ಗಕ್ಕೆ ಅದರಲ್ಲೂ ಯುವಕರು, ಮಹಿಳೆಯರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಮಾಡಬೇಕು. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದರು.
ಪೂರ್ವಾಗ್ರಹ ಪೀಡಿತವಲ್ಲ: ಕ್ಲಬ್‌ಹೌಸ್ ಎಂದರೆ ಹರಟೆಯ ಚಾವಡಿಯಾಗಿದೆ. ಮುಕ್ತಭಿಪ್ರಾಯ ವ್ಯಕ್ತವಾಗುವುದರಿಂದ ಹರಟೆಯ ಚಾವಡಿಯಿಂದ ಜಟಿಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮುಕ್ತವಾಗಿ ಕೇಳುವ ಮನಸುಗಳಿರುವುದರಿಂದ ಪೂರ್ವಾಗ್ರಹ ಪೀಡಿತನಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ ಅಕಾಡೆಮಿಯು ೪೦ ರ ಸಂಭ್ರಮದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಹೊಸತನ ಕಂಡುಕೊಳ್ಳುತ್ತಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಜಿ. ಜಗದೀಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ. ರೂಪಾ, ಮಾಧ್ಯಮ ಅಕಾಡೆಮಿಯ ಸದಸ್ಯರಾದ ಕೆ.ಕೆ ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಗೋಪಾಲ ಸಿಂಗಪ್ಪಯ್ಯ, ಜಗನ್ನಾಥ ಶೆಟ್ಟಿ ಬಾಳ , ಕೆ.ವಿ ಶಿವಕುಮಾರ್, ದೇವೇಂದ್ರ ಕಪನೂರು ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಜೋಗಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಖ್ಯಾತ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರ ಕರುನಾಡ ಕೋಟೆಗಳ ಸುರ್ವಣ ನೋಟ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನೀಡಲಾಯಿತು.
Comments are closed.