ಲಮಂಗಳೂರು: ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ವಿಧಿವಶರಾಗಿದ್ದಾರೆ. ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ದೀರ್ಘಕಾಲದ ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ಮನೆಯಲ್ಲಿ ಯೋಗಾಸನ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿದ್ದ ಆಸ್ಕರ್ ಫೆರ್ನಾಂಡಿಸ್‌ರವರ ಮೆದುಳಿಗೆ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆದಿದ್ದರೂ ಆರೋಗ್ಯದಲ್ಲಿ ಚೇತರಿಕೆಯಾಗಿರಲಿಲ್ಲ.
ಕಳೆದೆರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಎಐಸಿಸಿ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ದೂರವಾಣಿ ಮೂಲಕ ಫರ್ನಾಂಡಿಸ್ ಕುಟುಂಬದವರೊಂದಿಗೆ ಮಾತನಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್ ಆಸ್ಪತ್ರೆಗೆ ಈ ಹಿಂದೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿದ್ದರು. 1980ರಿಂದ 1996ರ ವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದು ಬಳಿಕ 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು.
Comments are closed.