ಮಂಗಳೂರು: ಕಾರಿನಲ್ಲಿ ಬಂದ ಅಪರಿಚಿತರ ತಂಡವೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಮಂಗಳೂರು ಬೆಂದೂರ್ವೇಲ್ ನಲ್ಲಿರುವ ಸೈಂಟ್ ಆಗ್ನೇಸ್ ಕಾಲೇಜಿನ ಗೇಟಿನ ಎದುರು ಭಾನುವಾರ ಮಧ್ಯಾಹ್ನ ನಡೆದಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಇದೀಗಾ ಮಂಗಳೂರು ಕಮಿಷನರ್ ಶಶಿಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಇದೊಂದು ಮಹಿಳಾ ದೌರ್ಜನ್ಯ ತಡೆ ನಿಟ್ಟಿನಲ್ಲಿ ನಡೆದ ಅಣಕು ಕಾರ್ಯಾಚರಣೆ ಎಂದಿದ್ದಾರೆ.

ನಡೆದಿದ್ದೇನು..?
ಮಹಿಳೆಯೊಬ್ಬರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ರಿಟ್ಜ್ ಕಾರಿನಲ್ಲಿ ಬಂದ ಯುವಕರ ತಂಡದಲ್ಲಿ ಓರ್ವ ಕಾರಿನಿಂದ ಇಳಿದು ಮಹಿಳೆಯ ಬ್ಯಾಗ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ, ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದು ಕೂಗಿಕೊಂಡಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ವ್ಯಕ್ತಿ ಮಹಿಳೆಯ ಕೈಯಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿತ್ತು.

ಕಮೀಷನರ್ ಹೇಳಿದ್ದೇನು…?
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ಮಹಿಳೆಯರ ಮೇಲೆ ಇಂತ ಘಟನೆಗಳು ನಡೆದಾಗ ಸಾರ್ವಜನಿಕರು, ಪೊಲೀಸರು ಮತ್ತು ಸಂತ್ರಸ್ತರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಪೊಲೀಸ್ ಇಲಾಖೆ ಕೈಗೊಂಡ ಅಣಕು ಪ್ರದರ್ಶನ ಇದಾಗಿತ್ತು. ಮಹಿಳೆ ಶೋಭಲತಾ ಕಟೀಲ್ ಎನ್ನುವವರಾಗಿದ್ದು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ಎನ್ನುವ ಸಂಸ್ಥೆಯಲ್ಲಿ ಅವರು ಆತ್ಮರಕ್ಷಣೆ ಕುರಿತು ತರಬೇತಿ ನೀಡುತ್ತಾರೆ. ಮಹಿಳೆಯು ತನ್ನನ್ನು ತಾನು ಯಾವ ರೀತಿ ರಕ್ಷಿಸಿಕೊಂಡಳು ಎಂಬ ವಿಡಿಯೋವನ್ನು ನಾವು ನೋಡಿದ್ದೇವೆ. ಸಾರ್ವಜನಿಕರು ಕೂಡ ರಕ್ಷಣೆಗೆ ಬಂದಿದ್ದಾರೆ. ಕಾರನ್ನು ಅಡ್ಡಗಟ್ಟಿ ಕೆಲವು ಯುವಕರು ಕೂಡ ಕಾರನ್ನು ಬೆನ್ನಟ್ಟಲು ಪ್ರಯತ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. 4 ನಿಮಿಷಗಳ ಒಳಗೆ ನಮಗೆ 112 ಗೆ ಕರೆ ಬಂದಿದ್ದು, ಬೆಳಿಗ್ಗೆ 11:10 ರ ವೇಳೆಗೆ, 112 ವಾಹನವು ಸ್ಥಳಕ್ಕೆ ತಲುಪಿ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿತು. ಪೊಲೀಸ್ ಇಲಾಖೆಗೂ ಕೂಡ ಈ ಅಣಕು ಪ್ರದರ್ಶನದ ಕುರಿತು ಮಾಹಿತಿ ಇರಲಿಲ್ಲ.
ಈ ಅಣಕು ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಹಿಳಾ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಯುವತಿಯರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು ಎಂದವರು ಹೇಳಿದ್ದಾರೆ.
Comments are closed.