(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಾಂಗ್ರೆಸ್ ನಾಯಕರು ಇತ್ತೀಚಿನ ದಿನಗಳಲ್ಲಿ ಸೋಲಿನ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್ ಸೋತಾಗ ಇವಿಎಂ ದೋಷ ಹಾಗೂ ಬಿಜೆಪಿಯಿಂದ ಅಧಿಕಾರ ದುರುಪಯೋಗ ಆಗಿದೆ ಎನ್ನುವ ಎರಡು ಆರೋಪ ಮಾಡುತ್ತಾ ಬಂದಿದೆ. ಒಂದೊಮ್ಮೆ ಬಿಜೆಪಿ ಸೋತರೆ ಇವಿಎಂ ದೋಷವಿರಲ್ಲ, ಅಧಿಕಾರವೂ ದುರುಪಯೋಗ ಆಗಲ್ಲ. ಇದನ್ನೆಲ್ಲಾ ಗಮನಿಸಿದರೆ ಕಾಂಗ್ರೆಸಿಗರ ಮಾನಸಿಕ ಸ್ಥಿತಿ ಸರಿಯಿಲ್ಲ. ಇದರಿಂದ ಹೊರಬಂದು ಅವರ ಪಕ್ಷದೊಳಗಿನ ಸಮಸ್ಯೆ ಅರಿತುಕೊಳ್ಳದಿದ್ದರೆ ದೇಶದೊಳಗಡೆ ಅವರು ಸೊನ್ನೆಯಾಗುತ್ತಾರೆ. ಅಧಿಕಾರ ದುರಪಯೋಗವೆನ್ನುವುದು ಕೇವಲ ಅವರ ಹೇಳಿಕೆಗೆ ಸೀಮಿತ. ಸರಕಾರದ ಜನಪರ ಕೆಲಸ, ಕೇಂದ್ರ ಹಾಗೂ ರಾಜ್ಯ ನಾಯಕರ ನಾಯಕತ್ವ ನೋಡಿ ಜನರು ಮತ ಹಾಕುತ್ತಿದ್ದಾರೆ. ಇವಿಎಂ, ಅಧಿಕಾರ ದುರುಪಯೋಗ ಎನ್ನುವ ಎರಡು ಸುಳ್ಳು ವಿಚಾರ ಹೇಳುವುದನ್ನು ಬಿಡದಿದ್ದರೆ ಕಾಂಗ್ರೆಸ್ ಜೀವನದಲ್ಲಿ ಗೆಲ್ಲೋದಿಲ್ಲ ಎಂದು ಶೃಂಗೇರಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಹೇಳಿದ್ದಾರೆ.
ತಾಲ್ಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಸೆ.10 ರಂದು ಗಣೇಶ ಚತುರ್ಥಿ ಹಿನ್ನೆಲೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಈವ ಉಳಿದರೆ ಜೀವನ ಮಾಡಬಹುದು ಎಂಬಂತೆ ಸರಕಾರ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಜನರಹಿತ ಚಿಂತನೆಯನ್ನು ಮುಂದಿಟ್ಟುಕೊಳ್ಳುತ್ತದೆ. ಎಲ್ಲರಿಗೂ ವ್ಯಾಕ್ಸಿನೇಷನ್ ಆಗುವ ತನಕ ಕೊರೋನಾ ನಿಯಂತ್ರಣದ ಸಲುವಾಗಿ ಕೆಲ ನಿರ್ದಿಷ್ಟ ಪ್ರದೇಶದಲ್ಲಿ ಸರಕಾರ ಸಮಯೋಚಿತವಾದ ನಿರ್ಬಂಧಗಳನ್ನು ಹೇರಿದೆ. ಹಬ್ಬಗಳನ್ನು ಆಚರಿಸುವುದರ ಜೊತೆ ಆರೋಗ್ಯ ಕಾಳಜಿ ಬಹುಮುಖ್ಯ. ದೇಶದ ಅರ್ಧದಷ್ಟು ಕೊರೋನಾ ಪ್ರಕರಣ ಕೇರಳ ರಾಜ್ಯದಲ್ಲಿದೆ. ಮಹಾರಾಷ್ಟ್ರ, ಕೇರಳದಲ್ಲಿ ಪ್ರಕರಣ ಉಲ್ಭಣಗೊಂಡಾಗ ಕರ್ನಾಟಕದಲ್ಲೂ ಪಾಸಿಟಿವಿಟಿ ಹೆಚ್ಚುತ್ತಿದೆ. ಸರಕಾರ ಹೇಳಿದೆಯೆಂದು ಯಾರೂ ಪಥ್ಯ ಪಾಲನೆ ಮಾಡಬೇಕೆಂದಲ್ಲ..ಬದಲಾಗಿ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹೇಳಿದ್ದು ಆ ಕ್ರಮ ನಡೆಯುತ್ತದೆ ಎಂದರು.
ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷ ಎರಡೂ ಒಂದೆ. ಪಕ್ಷ ಸಂಘಟನೆ ಹಿನ್ನೆಲೆ ಬಿ.ಎಸ್ ಯಡಿಯೂರಪ್ಪ, ನಳೀನ್ ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಪಕ್ಷದ ಯಾರೊಬ್ಬ ನಾಯಕ ಪ್ರವಾಸಕೈಗೊಂಡರೂ ಅದು ತಪ್ಪಲ್ಲ. ಇವರೆಲ್ಲರು ನಮ್ಮ ನಾಯಕರಾಗಿದ್ದು ಸುಮ್ಮನೆ ಗೊಂದಲ ಮೂಡಿಸುವುದು ಸರಿಯಲ್ಲ. 2023 ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂತೆ ಜಿ.ಪಂ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ರಾಜ್ಯದೆಲ್ಲೆಡೆ ಬಿಜೆಪಿ ಚುಕ್ಕಾಣಿ ಹಿಡಿಯಲಿದೆ. ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಕ್ರಮದ ನಿಟ್ಟಿನಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಾರೆ. ಅದನ್ನು ಭಿನ್ನಮತ ಎನ್ನಲಾಗದು. ಇದೆಲ್ಲವೂ ತಪ್ಪು ಮಾಹಿತಿಯಷ್ಟೆ. ಪ್ರಹ್ಲಾದ್ ಜೋಶಿಯವರ ಮಗಳ ಮದುವೆ ಸಂದರ್ಭ ನಾಯಕರನ್ನು ಭೇಟಿಯಾಗಿದ್ದಾರೆ. ನಾನು ಬೆಂಗಳೂರು ಹೋದಾಗ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾದರೆ ಅದು ಭಿನ್ನಾಭಿಪ್ರಾಯ ಅಂತಲ್ಲ..ಬದಲಾಗಿ ನಮ್ಮ ನಾಯಕರ ಜೊತೆ ನಮಗಿರುವ ಸಂಬಂಧ ಎಂದರು.
Comments are closed.