ಕರಾವಳಿ

ಬೈಂದೂರು ತಾಲೂಕಿನಲ್ಲಿ 50 ಎಕರೆ ಜಾಗ ಗೋಶಾಲೆಗೆ ಮೀಸಲಿರಿಸಲು ಸಚಿವ ಸುನಿಲ್ ಕುಮಾರ್‌ಗೆ ವಿ.ಹಿಂ.ಪ, ಭಜರಂಗದಳ ಮನವಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕಾಗಿ 50 ಎಕ್ರೆ ಜಾಗವನ್ನು ಮೀಸಲಿರಿಸಿ ಮಂಜೂರು ಮಾಡಬೇಕೆಂದು ವಿಶ್ವಹಿಂದೂ ಪರಿಷತ್, ಭಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ನೀಡಲಾಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಈವರೆಗೆ ಗೋಶಾಲೆ ಮಂಜೂರಾಗಿಲ್ಲ. ಗೋ ಮಾಳ ಉಳ್ಳವರ ಪಾಲಾಗುತ್ತಿದ್ದು ಸರಿಯಾಗಿ ಬಳಕೆಯಾಗುತ್ತಿಲ್ಲ. ತಾಲೂಕಿನಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಜಾನುವಾರುಗಳಿಗೆ ಶಾಶ್ವತ ನೆಲೆ ಇಲ್ಲದಂತಾಗಿದೆ. ಜಾನುವಾರುಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ಅಪಘಾತಗಳು ಹೆಚ್ಚುತ್ತಿದೆ, ಬೆಳೆ ಹಾನಿಯಾಗಿ ಕೃಷಿಕರಿಗೆ ನಷ್ಟವಾಗುತ್ತಿದೆ. ರಾತ್ರಿ ಸಮಯದಲ್ಲಿ‌ ಬೀಡಾಡಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದು ಗೋವುಗಳ ವಿನಾಶವಾಗುತ್ತಿದೆ. ರಕ್ಷಿಸಲ್ಪಟ್ಟ ಜಾನುವಾರುಗಳು, ಬೀಡಾಡಿ ಜಾನುವಾರುಗಳನ್ನು ಬೈಂದೂರಿನಿಂದ 80 ಕಿ.ಮೀ ದೂರದ ನೀಲಾವರ ಗೋಶಾಲೆಗೆ ಸಾಗಿಸಲು ಸಾಗಾಟ‌ ವೆಚ್ಚ ಹೆಚ್ಚುತ್ತಿದೆ. ಕೊಲ್ಲೂರು ಮೂಕಾಂಬಿಕ ಟ್ರಸ್ಟ್ ವತಿಯಿಂದ ಗೋ ಶಾಲೆ ನಿರ್ಮಾಣಕ್ಕಾಗಿ 50 ಎಕ್ರೆ ಜಮೀನು ಮಂಜೂರಾತಿಗೆ ಪ್ರಾಸ್ತಾವನೆ‌ ಕಳುಹಿಸಲಾಗಿದೆ. ಆದಷ್ಟು ಶೀಘ್ರ ಬೈಂದೂರು ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕೆ 50 ಎಕ್ರೆ ಜಾಗ ಮೀಸಲಿರಿಸಿ ಮಂಜೂರು ಮಾಡಬೇಕು ಮಾತ್ರವಲ್ಲ ಶ್ರೀ‌ಮೂಕಾಂಬಿಕಾ ದೇವಸ್ಥಾನದ ಕಡೆಯಿಂದ ಗೋಶಾಲೆಯನ್ನು ಸರಕಾರವೇ ನಿಬಾಯಿಸಬೇಕು ಎಂದು ಆಗ್ರಹಿಸಿದರು.

ಈ‌ ಸಂದರ್ಭ ಬೈಂದೂರು ತಾಲೂಕು ಭಜರಂಗದಳದ ಸಂಚಾಲಕ ಸುಧಾಕರ ನೈಲಾಡಿ, ಶಿರೂರು ಅಳಿವೆಗದ್ದೆ ಘಟಕದ ಸಂಚಾಲಕ ಕಾರ್ತಿಕ್, ತ್ರಾಸಿ ಘಟಕದ ಸಂಚಾಲಕ ಕಿರಣ್ ಆನಗೋಡು, ಸಾಪ್ತಾಹಿಕ‌ ಮಿಲನ್ ಪ್ರಮುಖ್ ಶರತ್ ಮೋವಾಡಿ, ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮುದೂರು, ಪಡುವರಿ ಘಟಕದ ಅಧ್ಯಕ್ಷ ಗುರುರಾಜ್ ಕಲ್ಗಂಟ, ಭಜರಂಗದಳ ಕಾರ್ಯಕರ್ತರಾದ ಸುಖೇಶ್ ಯಡ್ತರೆ, ಶಶಾಂಕ್ ತ್ರಾಸಿ ಮೊದಲಾದವರಿದ್ದರು.

Comments are closed.