ಬೆಂಗಳೂರು: ಬೆಂಗಳೂರಿನ ಕೋರಮಂಗಲ ಮಂಗಳ ಕಲ್ಯಾಣ ಮಂಟಪದ ಬಳಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದರು.

ಕಳೆದ ಮಧ್ಯರಾತ್ರಿ ಆಡಿ ಕ್ಯೂ 3 ಕಾರು ಫುಟ್ ಪಾತ್ ಮೇಲಿದ್ದ ಬೀದಿ ದೀಪ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಆಡಿ ಕಾರು ಕಂಬಕ್ಕೆ ಅಪ್ಪಳಿಸಿ ಸ್ಥಳದಲ್ಲಿಯೇ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕರುಣಾಸಾಗರ, ಬಿಂದು, ಇಶಿತಾ, ಡಾ ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ.
ಡಿಎಂಕೆ ಶಾಸಕನ ಪುತ್ರ..
ಮೃತಪಟ್ಟವರೆಲ್ಲರು ತಮಿಳುನಾಡು ಮೂಲದವರಾಗಿದ್ದು ಬೆಂಗಳೂರಿಗೆ ಕೆಲಸ ನಿಮಿತ್ತ ಬಂದಿದ್ದರು ಎಂದು ತಿಳಿದುಬಂದಿದೆ. ಅವರಲ್ಲಿ ಮೃತ ಕರುಣಾಸಾಗರ್ ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಅವರ ಪುತ್ರ ಮತ್ತು ಅವರು ಮದುವೆಯಾಗಬೇಕಿದ್ದ ಯುವತಿ ಬಿಂದು ಕೂಡ ಮೃತಪಟ್ಟಿದ್ದಾರೆ.

ಸೋಮವಾರ ಸಾಯಂಕಾಲ ಬೆಂಗಳೂರಿಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಖರೀದಿಸಲು ಕರುಣಾಸಾಗರ್ ತಮ್ಮ ಆಡಿ ಕಾರಿನಲ್ಲಿ ಬಂದಿದ್ದರು. ಅವರು ಬೆಂಗಳೂರಿಗೆ ಬರುವಾಗ ತಮ್ಮ ಭಾವಿ ಪತ್ನಿ ಬಿಂದು ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಹಿಂತಿರುಗಿ ಚೆನ್ನೈಗೆ ಹೋಗುವಾಗ ಮಧ್ಯರಾತ್ರಿಯಾಗಿದ್ದು ವೇಗವಾಗಿ ಕಾರು ಚಲಾಯಿಸಿದ್ದೇ ಅಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಅಪಘಾತದ ತೀವ್ರತೆಗೆ ಆಡಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಂತರ ಗೋಡೆಗೆ ಢಿಕ್ಕಿ ಹೊಡೆದು ನಿಂತಿದೆ. ಒಳಗಿದ್ದವರ ಕೈ ಕಾಲು ಮುರಿದು ಹೋಗಿತ್ತು. ಕಾರು ನುಜ್ಜುಗುಜ್ಜಾಗಿ ಚಕ್ರ ದೂರ ಹೋಗಿ ಬಿದ್ದಿತ್ತು. ಅಪಘಾತದ ಶಬ್ದ ತೀವ್ರವಾಗಿ ಕೇಳಿಬಂದು ಪಕ್ಕದಲ್ಲಿದ್ದ ನಿವಾಸಿಗಳು ಆಗಮಿಸಿದರು.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
Comments are closed.