
ಮಂಗಳೂರು / ಸುಬ್ರಹ್ಮಣ್ಯ : ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ಅವರು ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿದ ‘ಬಿರ್ದ್ದ ಕಂಬುಲ’ (ವೀರ ಕಂಬಳ) ಸಿನಿಮಾ ನಿರ್ಮಿಸಲು ಹೊರಟ್ಟಿದ್ದು, ಶೀಘ್ರದಲ್ಲೇ ತೆರೆಗೆ ಬರಲಿರುವ ‘ಬಿರ್ದ್ದ ಕಂಬುಲ’ ಚಲನ ಚಿತ್ರದ ಹೆಸರನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ‘ದೇವರ ಆರಾಧನೆಯಿಂದ ಬದುಕು ಬಂಗಾರವಾಗುತ್ತದೆ. ಬದುಕಿನಲ್ಲಿ ನೆಮ್ಮದಿಯನ್ನು ನಾವೇ ಗಳಿಸಿಕೊಳ್ಳಬೇಕು. ಉತ್ತಮ ಮನಃಸ್ಥಿತಿಯನ್ನು ಹೊಂದುವ ಮೂಲಕ ಜೀವನದಲ್ಲಿ ಸುಖ-ಶಾಂತಿ ದೊರಕುತ್ತದೆ. ಕಲಾಕ್ಷೇತ್ರವು ಬದುಕಿಗೆ ನೆಮ್ಮದಿ ನೀಡುವ ತಾಣ ಎಂದು ಹೇಳಿದರು.
‘ನಮ್ಮ ಸಂಸ್ಕೃತಿ, ಕಲೆ, ಧಾರ್ಮಿಕತೆಯನ್ನು ಎಲ್ಲೆಡೆ ತಲುಪಿಸುವಲ್ಲಿ ಕಲಾರಂಗದ ಪಾತ್ರ ಅನನ್ಯ. ಸಿನಿಮಾ ಕ್ಷೇತ್ರ ರಾಷ್ಟ್ರದ ಸಂಸ್ಕೃತಿಯನ್ನು ಜಗದಗಲಕ್ಕೆ ತಲುಪಿಸಿದೆ. ತುಳುನಾಡು ಶ್ರೀಮಂತವಾದ ಪರಂಪರೆಯನ್ನು ಒಳಗೊಂಡಿದೆ. ತುಳುನಾಡಿನ ಸಂಸ್ಕೃತಿಯ ಕೊಡುಗೆಯಾದ ಕಂಬಳವು ಸಹಸ್ರಾರು ವರ್ಷ ಇತಿಹಾಸವನ್ನು ಹೊಂದಿದೆ. ಇಂತಹ ಸಾಂಸ್ಕೃತಿಕ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಿಸುವ ಮೂಲಕ ತುಳು ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಲು ಹೊರಟಿರುವುದು ಶ್ಲಾಘನೀಯ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದ ನಿರ್ಮಾಪಕ ಅರುಣ್ ರೈ, ಚಿತ್ರಕ್ಕೆ ಸಂಭಾಷನೆ ಬರೆದಿರುವ ಹಿರಿಯ ಚಿತ್ರ ನಿರ್ದೇಶಕ, ಸಾಹಿತಿ ವಿಜಯ ಕುಮಾರ್ ಕೊಡಿಯಾಲ ಬೈಲ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶ್ರೀವತ್ಸ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ್ ಮರ್ದಾಳ, ಮನೋಜ್ ಸುಬ್ರಹ್ಮಣ್ಯ,, ಕಲಾವಿದ ಸುಂದರ ರೈ ಮಂದಾರ, ಪ್ರಮುಖರಾದ ಜಗದೀಶ್ ಅಧಿಕಾರಿ, ಗುಣಪಾಲ ಕಡಂಬ, ರಾಜೇಶ್ ಎನ್.ಎಸ್, ಪ್ರಶಾಂತ್ ಸುವರ್ಣ, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಶೋಕ್ ಆಚಾರ್ಯ, ಗಿರಿಧರ ಸ್ಕಂಧ, ರವಿ ಕಕ್ಕೆ ಪದವು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments are closed.