ಇಸ್ಲಾಮಾಬಾದ್: ಹಿಂದೂ ದೇವಸ್ಥಾನದಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹಿಮ್ ಯಾರ್ ಖಾನ್ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರ ಬಂಧನ
ಭೋಂಗ್ ಪಟ್ಟಣದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸಂಪೂರ್ಣ ರಕ್ಷಣೆ ಒದಗಿಸಿದ್ದರೂ ಈ ಅಹಿತಕರಣ ಕೃತ್ಯ ನಡೆದಿತ್ತು. ಭೋಂಗ್ ನಲ್ಲಿ ಅಶಾಂತಿ ಉಂಟುಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ದಕ್ಷಿಣ ಪಂಜಾಬ್ ನ ಹೆಚ್ಚುವರಿ ಐಜಿಪಿ ಕ್ಯಾಪ್ಟನ್ ಜಾಫರ್ ಇಕ್ಬಾಲ್ ಅವಾನ್ ಹೇಳಿದ್ದಾರೆ.
ಈ ತಿಂಗಳ 4ರಂದು ಉದ್ರಿಕ್ತ ಗುಂಪೊಂದು ರಹಿಮ್ ಯಾರ್ ಖಾನ್ ಜಿಲ್ಲೆಯಲ್ಲಿ ಭೋಂಗ್ ನಗರದಲ್ಲಿ ಗಣೇಶ ದೇವಸ್ಥಾನವನ್ನು ಹಾನಿಗೊಳಿಸಿತ್ತು. ಮಾರಕಾಸ್ತ್ರಗಳನ್ನು ಹೊಂದಿದ್ದ ಸುಮಾರು 50 ಜನರಿದ್ದ ಉದ್ರಿಕ್ತ ಗುಂಪು ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿಗಳನ್ನು ಹಾನಿಗೊಳಿಸಿ, ದೇವಸ್ಥಾನದ ಪೀಠೋಪಕರಣಗಳನ್ನು ಹಾನಿಗೊಳಿಸಿರುವ ವಿಡಿಯೋ ದೃಶ್ಯ ಬಹಿರಂಗಗೊಂಡಿದೆ.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದೆ. ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂದೂ ಸಮುದಾಯಕ್ಕೆ ಎಲ್ಲ ರೀತಿಯ ರಕ್ಷಣೆ ಒದಗಿಸಲಾಗುವುದು ಎಂದು ಹೆಚ್ಚುವರಿ ಐಜಿ ಇಕ್ಬಾಲ್ ಆವಾನ್ ತಿಳಿಸಿದ್ದಾರೆ.

Comments are closed.