ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ “ರೈತ ಸ್ಪಂದನ” : ಸಹಕಾರ ಸಚಿವರಿಂದ ವಿವಿಧ ರೀತಿಯ ಕೃಷಿ ಸಾಲ ಸೌಲಭ್ಯಗಳ ವಿತರಣೆ

Pinterest LinkedIn Tumblr

ಮಂಗಳೂರು, ಜುಲೈ.14 : ಕೃಷಿ ಮಾರುಕಟ್ಟೆ ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ನಗರದ ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ಜು.14ರ ಬುಧವಾರ ರೈತ ಸ್ಪಂದನ ಕಾರ್ಯಕ್ರಮದಡಿ 2021-22ನೇ ಸಾಲಿಗೆ ವಿವಿಧ ಕೃಷಿಸಾಲ ಸೌಲಭ್ಯಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಚಿವರು ವಿವಿಧ ಸಾಲಸೌಲಭ್ಯಗಳ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಿಸಿದರು

ಬಳಿಕ ಮಾತನಾಡಿದ ಸಚಿವರು, ಕೋವಿಡ್ ಸಂತ್ರಸ್ತ 10,400 ರೈತರ 81 ಕೋಟಿ ರೂ ಸಾಲವನ್ನು ಸಹಕಾರಿ ಸಂಘಗಳ ಮೂಲಕ ಮನ್ನಾ ಮಾಡುವ ಗುರಿಯನ್ನು ಸರಕಾರ ಹೊಂದಿದೆ. ಈ ನಿಟ್ಟಿನಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ 154 ಕೋವಿಡ್ ಸಂತ್ರಸ್ತರಿಗೆ ತಲಾ ಒಂದು ಲಕ್ಷ ರೂ. ಸಾಲಮನ್ನಾ ಯೋಜನೆಗೆ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ಪ್ರಥಮವಾಗಿ ಮಾದರಿ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತ ಸ್ಪಂದನ ಕಾರ್ಯಕ್ರಮದ ಮೂಲಕ ಉಡುಪಿ, ದ.ಕ ಜಿಲ್ಲೆಯ ಸುಮಾರು 750ಕ್ಕೂ ಅಧಿಕ ರೈತರಿಗೆ ಸುಮಾರು 455 ಕೋಟಿ ರೂ.ಗಳಿಗೂ ಅಧಿಕ ಸಾಲ ನೀಡುವ ಕಾರ್ಯ ಕ್ರಮ ಹಮ್ಮಿಕೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ಎಸ್.ಸಿ.ಡಿ.ಸಿ.ಸಿ. ಬ್ಯಾಂಕನ್ನು ಅಭಿನಂದಿಸಿದರು.

ರಾಜ್ಯದಲ್ಲಿ ಈ ಬಾರಿ ಸಹಕಾರಿ ಸಂಘಗಳ ಮೂಲಕ 30 ಲಕ್ಷದ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಇದೆ ಎಂದ ಸಚಿವರು, ಕೋವಿಡ್ ಸಂದರ್ಭದಲ್ಲೂ ಸಹಕಾರಿ ರಂಗದ ರೈತರು ಶೇ.90ಕ್ಕೂ ಅಧಿಕ ಸಾಲ ಮರು ಪಾವತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಸಮಾರಂಭ ದ ಅಧ್ಯಕ್ಷತೆ ವಹಿಸಿದ್ದ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಸಂಘ ಜನರ ಸಂಸ್ಥೆಯಾಗಿ ಬೆಳೆಯಲು ಸಹಕಾರಿ ಸಚಿವರು ಬೆಂಬಲ ನೀಡಿದ್ದಾರೆ. ಬ್ಯಾಂಕ್ ಕೋವಿಡ್ ಸಂದರ್ಭದ ಎಂದು ಜನರ ನೆರವಿಗೆ ನಿಂತಿದೆ. 26 ವರ್ಷದಲ್ಲಿ ನಿರಂತರ ಕೃಷಿ ಸಾಲ ಮರುಪಾವತಿ ಮಾಡಿದ ದೇಶದ ಅಗ್ರಸ್ಥಾನದ ಬ್ಯಾಂಕ್ ಎಸ್ ಸಿಡಿಸಿಸಿ ಬ್ಯಾಂಕ್ ಎನ್ನುವುದು ಹೆಮ್ಮೆಯ ಸಂಗತಿ. ಕೋವಿಡ್ ನಿಂದ ಮೃತಪಟ್ಟ ರೈತ ಕುಟುಂಬದ ಕೃಷಿ ಸಾಲದಲ್ಲಿ ಗರಿಷ್ಠ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಲು ನಿರ್ಧರಿಸಿರುವುದು ರಾಜ್ಯದಲ್ಲಿ ಪ್ರಥಮ ಎಂದರು.

ಕೋವಿಡ್ ಸಂಕಷ್ಟ ಸಮಯದಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸಾಲ ಸೌಲಭ್ಯವನ್ನು ನೀಡಲು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮುಂದಾಗಿದೆ. ಚಿನ್ನಾಭರಣ ಈಡಿನ ಸಾಲದ ಬಡ್ಡಿದರ ಇಳಿಕೆ ಮಾಡಲಾಗಿದ್ದು, ತಿಂಗಳ ಬಡ್ಡಿ ಕೇವಲ ಶೇ.0.75 ಆಗಿದೆ. ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಇಂಧನ ಬಳಕೆ ಕಡಿತ ಮಾಡಲು ಇಲೆಕ್ಟ್ರಿಕ್ ವಾಹನಗಳ ಖರೀದಿಗೆ ಬ್ಯಾಂಕ್ ಉತ್ತೇಜನ ನೀಡಲು ಮುಂದಾಗಿದ್ದು, ಇಲೆಕ್ಟ್ರಿಕ್ ಸ್ಕೂಟರ್ ಹಾಗೂ ಇಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಸಾಮಾನ್ಯ ವಾಹನ ಸಾಲಬಡ್ಡಿಯಲ್ಲಿ ಶೇ.1.00ರ ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.

ಪ್ರಧಾನ ಮಂತ್ರಿ ಸ್ವ-ನಿಧಿ ಸಾಲ ವಿತರಣೆಯನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇದರ ಅಧ್ಯಕ್ಷ ಬೆಳ್ಳಿ ಪ್ರಕಾಶ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,
ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್, ಶಾಸಕರಾದ ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ನಿರಂಜನ, ಟಿ.ಜಿ.ರಾಜರಾಮ ಭಟ್, ಎಂ.ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಎಸ್.ಬಿ.ಜಯರಾಮ ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಮೋನಪ್ಪ ಶೆಟ್ಟಿ, ಕೆ.ಹರಿಶ್ಚಂದ್ರ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್, ಜೈರಾಜ್ ಬಿ., ಮೀನುಗಾರರ ಒಕ್ಕೂಟದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕೆಎಂಎಫ್ ದ.ಕ. ಜಿಲ್ಲಾಧ್ಯಕ್ಷ ರವಿರಾಜ ಹೆಗ್ಡೆ, ದ.ಕ. ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ಯ ರೈ, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಇಂದ್ರಾಳಿ, ಅಪೆಕ್ಸ್ ಬ್ಯಾಂಕ್ ಸಿಇಒ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು. ಹಾಗೂ ಇತರೆ ಗಣ್ಯರು, ಸಹಕಾರಿಗಳು ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಲಕ್ಷ್ಮಣ್ ಕುಮಾರ್ ಮಲ್ಲೂರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಶಶಿಕುಮಾರ್ ವಂದಿಸಿದರು.

Comments are closed.