
ಮಂಗಳೂರು / ಪಾವಂಜೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ), ಸಂಸ್ಥೆಯು ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗಾಗಿ ಸಲ್ಲಿಸುತ್ತಿರುವ ಸೇವೆಗಳನ್ನು ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯಸಾಧನೆಗಳನ್ನು ಮೆಚ್ಚಿ ಪ್ರೊಫೆಸರ್ ಎಂ.ಎಲ್. ಸಾಮಗ ಅವರು ತಾನು ಉಡುಪಿಯ ಕೊಡವೂರಿನಲ್ಲಿ ತೀರ್ಥರೂಪರ ಹೆಸರಿನಲ್ಲಿ, ಪತ್ನಿ ಪ್ರತಿಭಾ ಎಲ್. ಸಾಮಗ ಅವರೊಂದಿಗೆ ಸಮಾಲೋಚಿಸಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ 50 ಸೆನ್ಸ್ ವಿಶಾಲವಾದ ಖಾಲಿ ನಿವೇಶನವನ್ನು ನೀಡುವುದಾಗಿ ಘೋಷಿಸಿದರು.
ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಜರಗಿದ ತಾಳಮದ್ದಲೆಯ ಸಭಾಕಾರ್ಯಕ್ರಮದಲ್ಲಿ ಎಂ.ಎಲ್. ಸಾಮಗರು ಭಾಗವಹಿಸಿ 50 ಸೆನ್ಸ್ ಜಾಗವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಉಚಿತವಾಗಿ ನೀಡುವುದಾಗಿ ತಿಳಿಸಿದರು.
ತಾಳಮದ್ದಲೆಯ 6ನೇಯ ದಿವಸದ ಉದ್ಘಾಟನೆಯನ್ನು ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಸೇರಾಜೆ ಸತ್ಯನಾರಾಯಣ ಭಟ್ ಜ್ಯೋತಿ ಬೆಳಗಿಸಿ ನೆರವೇರಿಸಿದರು.ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸರಾದ ಪ್ರಭಾಕರ ಜೋಷಿ, ಮಧುಕರ ಭಾಗವತ್, ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪದಾಧಿಕಾರಿಗಳಾದ ಡಾ! ಮನು ರಾವ್, ಪಡುಬಿದ್ರಿ ದುರ್ಗಾಪ್ರಸಾದ್ ಈರೋಡ್, ಪುರುಷೋತ್ತಮ ಭಂಡಾರಿ ಅಡ್ಯಾರ್, ಸುದೇಶ್ ಕುಮಾರ್ ರೈ ಹಾಗೂ ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಕೃತಜ್ಞತೆ :
ಪಟ್ಲ ಫೌಂಡೇಶನ್ ಟ್ರಸ್ಟ್ ಗೆ 50 ಸೆನ್ಸ್ ಜಾಗವನ್ನು ಉಚಿತವಾಗಿ ನೀಡಿರುವ ಪ್ರೊಫೆಸರ್ ಎಂ.ಎಲ್. ಸಾಮಗರ ಕುಟುಂಬಕ್ಕೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಫೌಂಡೇಶನ್ ನ ಸರ್ವಸದಸ್ಯರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
Comments are closed.