ಕರಾವಳಿ

ಕಲಾ ಆರಾಧನೆಯಿಂದ ಕಲಾವಿದರಿಗೆ ಸೂಕ್ತ ನೆಲೆ : ಪ್ರಭಾಕರ ಜೋಶಿ

Pinterest LinkedIn Tumblr

ಪಾವಂಜೆಯಲ್ಲಿ ದಶಕಥಾಸುಧಾ ತಾಳ ಮದ್ದಲೆಗೆ ಚಾಲನೆ

ಪಾವಂಜೆ : ಕಲಾ ಪೋಷಕರು ಕಲಾ ಆರಾಧನೆ ಮಾಡುವುದರಿಂದ ಕಲೆಯನ್ನೇ ಜೀವನವನ್ನಾಗಿಟ್ಟು ಕೊಂಡಿರುವ ಕಲಾವಿದರಿಗೆ ಸೂಕ್ತ ನೆಲೆಯನ್ನು ನೀಡಿದಂತಾಗುತ್ತದೆ. ಪಾವಂಜೆ ಕ್ಷೇತ್ರ ಕಳೆದ ಹತ್ತು ವರ್ಷದಿಂದ ಈ ಯಾಗದಲ್ಲಿ ತೊಡಗಿದ್ದು, ಪಟ್ಲ ಫೌಂಡೇಶನ್ ಇದಕ್ಕೆ ಪೂರಕವಾಗಿ ತನ್ನನ್ನು ತೊಡಗಿಸಿಕೊಂಡಿದೆ. ಇದು ನೈಜ ಕಲಾ ಪೋಷಣೆ ಎಂದು ಯಕ್ಷಗಾನ ವಿಮರ್ಷಕ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕಡಂದಲೆ ಸುರೇಶ ಭಂಡಾರಿ ಹಾಗೂ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಸಹಕಾರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಹತ್ತು ದಿನಗಳ ತಾಳಮದ್ದಲೆ ಕಾರ್ಯಕ್ರಮ “ದಶಕಥಾಸುಧಾ”ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉದ್ಯಮಿ ಪ್ರಸಾದ್ ಶೆಟ್ಟಿ ಹಾಗೂ ಮಲ್ಲಿಕಾ ಪ್ರಸಾದ್ ಶೆಟ್ಟಿ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮೂಲಕ ಕಲಾವಿದ ದಿ. ಶ್ರೀಧರ ಭಂಡಾರಿ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಶ್ರೀಧರ ಭಂಡಾರಿ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಅವರ ನೆರಳಿನಲ್ಲಿ ಗೆಜ್ಜೆ ಕಟ್ಟಿದವರು ಎಂದಿಗೂ ಮರೆಯಬಾರದು, ಗುರುವಾಗಿದ್ದರೂ ಕಲಾವಿದರೊಂದಿಗೆ ತಾನೂಬ್ಬ ಸಹ ಕಲಾವಿದ ಎಂದೇ ಗುರುತಿಸಿಕೊಳ್ಳಲು ಬಯಸುವವರು ಅಮರರಾಗುತ್ತಾರೆ ಎಂದರು.

ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಪೂರ್ಣಿಮಾ, ಅಭಿವೃದ್ಧಿ ಅಧಿಕಾರಿ ರಮೇಶ್ ನಾಯ್ಕ, ಉಷಾ ಶ್ರೀಧರ ಭಂಡಾರಿ, ದೇವಿಪ್ರಸಾದ್ ಶೆಟ್ಟಿ ಪುತ್ತೂರು, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ಡಾ. ಮನು ರಾವ್, ಸುದೇಶ್‌ಕುಮಾರ್ ರೈ , ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

Comments are closed.