ಕರಾವಳಿ

ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್,ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಜುಲೈ 5ರಿಂದ 12 ರವರೆಗೆ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಪೆಟ್ರೋಲ್, ಡೀಸೆಲ್‌ ಅಡುಗೆ ಅನಿಲಗಳ ಬೆಲೆಯೇರಿಕೆಯನ್ನು ಖಂಡಿಸಿ,ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ವಿರೋಧಿಸಿ,ವಿದ್ಯುತ್ ದರ ಏರಿಸಿದ ರಾಜ್ಯ ಸರಕಾರದ ವಿರುದ್ಧ, ಬಸ್ ಪ್ರಯಾಣ ದರ ಏರಿಕೆ ಮಾಡಿದ ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರ ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ಜುಲೈ 5 ರಿಂದ 12 ರವರೆಗೆ ಮಂಗಳೂರು ನಗರದಾದ್ಯಂತ ಕನಿಷ್ಠ 50 ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ವಾರಾಚರಣೆ ಮಾಡಬೇಕೆಂದು ಹಾಗೂ ಜುಲೈ 7 ರಂದು ಬೆಳಿಗ್ಗೆ 10 ಕ್ಕೆ ನಗರದ ಹಂಪನಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ .

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ,ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕ್ರಷ್ಣ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಸಿಪಿಐಎಂ ಮಂಗಳೂರು ಉತ್ತರ ಸಮಿತಿ ಕಾರ್ಯದರ್ಶಿ ದಯಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ, ಉತ್ತರ ಸಮಿತಿಗಳ ಜಂಟಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.

ಇಂದು ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆಗಳು ವಿಪರೀತವಾಗಿ ಹೆಚ್ಚಳವಾಗುತ್ತಿದ್ದರೂ,ನರೇಂದ್ರ ಮೋದಿ ಸರಕಾರ ಬಾಯಿ ಬಿಡುತ್ತಿಲ್ಲ.

ಮತ್ತೊಂದು ಕಡೆ ರಾಜ್ಯದ ಬಿಜೆಪಿ ಸರಕಾರ ವಿದ್ಯುತ್ ದರವನ್ನು ಕೂಡ ವಿಪರೀತವಾಗಿ ಹೆಚ್ಚಿಸಿ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಇವೆಲ್ಲದಕ್ಕೆ ಪೂರಕವೆಂಬಂತೆ ದ.ಕ.ಜಿಲ್ಲೆಯ ಖಾಸಗಿ ಬಸ್ ಮಾಲಕರು ಕೂಡ ಏಕಾಏಕಿಯಾಗಿ ಬಸ್ ಪ್ರಯಾಣ ದರವನ್ನೂ ಏರಿಸಿರುವುದು,ಇದಕ್ಕೆ ಜಿಲ್ಲಾಡಳಿತವು ಸಂಪೂರ್ಣ ಒಪ್ಪಿಗೆ ಸೂಚಿಸಿರುವುದು ತೀವ್ರ ಖಂಡನೀಯ.

ಇಂತಹ ನ್ಯಾಯಪರ ಹೋರಾಟಗಳಲ್ಲಿ ಸಾರ್ವಜನಿಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಸೋಲಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ತಿಳಿಸಿದ್ದಾರೆ.

Comments are closed.