ಕರಾವಳಿ

ಮಂಗಳೂರಿನಲ್ಲಿ ನಿಷೇಧಿತ ಹೈಡ್ರೋವೀಡ್ ಗಾಂಜಾ ಪತ್ತೆ :ವೈದ್ಯ ವಿದ್ಯಾರ್ಥಿನಿ ಸಹಿತಾ ಇಬ್ಬರ ಬಂಧನ-ಸೊತ್ತು ವಶ

Pinterest LinkedIn Tumblr

ಮಂಗಳೂರು, ಜೂನ್. 30: ಹೈಡ್ರೋವೀಡ್ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೈದ್ಯ ವಿದ್ಯಾರ್ಥಿನಿ (ಅಂತಿ ವರ್ಷದ ಎಂಬಿಬಿಎಸ್) ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ದೇರಳಕಟ್ಟೆಯಲ್ಲಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಕಾಸರಗೋಡಿನ ಮಂಗಲ್ಪಾಡಿಯ ಅಜ್ಮಲ್ ಟಿ. (24) ಮತ್ತು ತಮಿಳ್ನಾಡು ಕನ್ಯಾಕುಮಾರಿ ಮೂಲದ ಸದ್ಯ ಸುರತ್ಕಲ್‌ನಲ್ಲಿ ವಾಸವಾಗಿರುವ ಮಿನು ರಶ್ಮಿ (27) ಬಂಧಿತ ಆರೋಪಿಗಳು.

ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ದೇರಳಕಟ್ಟೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂ.ನಿಂದ 1 ಕೋ.ರೂ.ವರೆಗಿನ ಮೌಲ್ಯದ ನಿಷೇಧಿತ ಹೈಡ್ರೋವೀಡ್ ಗಾಂಜಾ, 1 ಸ್ಯಾಂಟ್ರೋ ಕಾರು, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಹೈಡ್ರೋವೀಡ್ ಗಾಂಜಾವು ಗ್ರಾಂ ಒಂದಕ್ಕೆ 2000 ರೂ.ನಿಂದ 25,000 ರೂ.ವರೆಗೆ ದರವನ್ನು ಹೊಂದಿದೆ. ಈ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಹೈಡ್ರೋವೀಡ್ ಗಾಂಜಾವನ್ನು ಆರೋಪಿಗಳು ಯೂರೋಪ್ ದೇಶದಿಂದ ತರಿಸಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಇದನ್ನು ಕೊಣಾಜೆ, ಉಳ್ಳಾಲ, ಉಪ್ಪಳ ಹಾಗೂ ಮಂಗಳೂರಿನ ವಿವಿಧ ಕಡೆಗಳಲ್ಲಿ ಮಾರಾಟ ಮಾಡಲು ತರಿಸಿರುವ ಬಗ್ಗೆ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.

ಕಾಸರಗಾಡು ಮೂಲದ ಡಾ. ನದೀರ್ ಈ ದಂಧೆಯ ಪ್ರಮುಖ ಆರೋಪಿಯಾಗಿದ್ದಾನೆ. ವೈದ್ಯನಾಗಿರುವ ಈತ ವಿದೇಶದಲ್ಲಿದ್ದು, ತಲೆಮರೆಸಿಕೊಂಡಿದ್ದಾನೆ.

ಈತನ ಸೂಚನೆಯ ಮೇರೆಗೆ ಕಾಂಞಂಗಾಡ್‌ನ ಹರಿಮಲ ಆಸ್ಪತ್ರೆಯಲ್ಲಿ ವೈದ್ಯೆಕೀಯ ತರಭೇತಿಯಲ್ಲಿರುವ ಮಿನು ರಶ್ಮಿ ಮತ್ತು ಅಜ್ಮಲ್ ಎಂಬವರು ಹೈಡ್ರೋವೀಡ್ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದರು.

ಜೂನ್.29ರಂದು ಆರೋಪಿಗಳಾದ ಅಜ್ಮಲ್ ಮತ್ತು ಮಿನು ರಶ್ಮಿ ಕಾಂಞಗಾಡ್‌ನಿಂದ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಬಳಿಕ ಕಾರಿನಲ್ಲಿ ದೇರಳಕಟ್ಟೆಗೆ ತೆರಳಿ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ 1.236 ಕೆಜಿ ತೂಕದ ಗಾಂಜಾ ವಶಪಡಿಸಿ ಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ..

ಈ ಬಗ್ಗೆ ಇಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್ ಉಪಸ್ಥಿತರಿದ್ದರು.

Comments are closed.