ಕರಾವಳಿ

ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಜುಲೈ 5 ರೊಳಗೆ ತೀರ್ಮಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಬಿ ಮತ್ತು ಸಿ ದರ್ಜೆ ದೇವಾಲಯಗಳನ್ನು ತೆರೆಯಲು ಅಂತಹ ಸಮಸ್ಯೆಗಳಿಲ್ಲ. ಆದರೆ ಎ ದರ್ಜೆ ದೇವಸ್ಥಾನಗಳನ್ನು ತೆರೆದಾಗ ನೂರಾರು‌ ಸಂಖ್ಯೆಯಲ್ಲಿ ಭಕ್ತರು ಬಂದರೆ ಸಾಮಾಜಿಕ ಅಂತರ ಸಮಸ್ಯೆಯಾಗುವ ಸಂಭವವಿದ್ದು ವಿಸ್ತೃತ ಚರ್ಚೆ ನಡೆಸಿ ಜು.5ರೊಳಗೆ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮದಾಯಿ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಂಗಳವಾರದಂದು ಕುಂದಾಪುರದ ಗೋಪಾಡಿ ಗ್ರಾಮಪಂಚಾಯತಿಗೆ ಭೇಟಿ ನೀಡಿ ಕೋವಿಡ್ -19 ವಿಚಾರದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ದೇವಸ್ಥಾನಗಳನ್ನು ತೆರೆದರೂ‌ ಕೂಡ ಮೊದಲಿಗೆ‌ಎಲ್ಲಾ ತರದ ಪೂಜೆ-ಪುನಸ್ಕಾರ, ಅನ್ನದಾನಕ್ಕೆ ಅವಕಾಶ ಕಲ್ಪಿಸಬೇಕೆ ಎಂಬ ಬಗ್ಗೆಯೂ ಜಿಜ್ಞಾಸೆಯಿದೆ. ಬುಧವಾರದಂದು ಬೆಂಗಳೂರಿಗೆ ತೆರಳಲಿದ್ದು ಈ ಬಗ್ಗೆ ಗುರುವಾರ ಅಥವಾ ಶುಕ್ರವಾರ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗುತ್ತದೆ ಎಂದರು.

ಗೋವಿಂದ ತೀರ್ಥಕ್ಕೆ ಭೇಟಿ ನೀಡುವೆ…
ಪುರಾಣ ಪ್ರಸಿದ್ಧ ಗೋವಿಂದ ತೀರ್ಥಕ್ಕೆ ಕೊರೋನಾ ಕಾರಣದಿಂದ ಈವರೆಗೆ ಹೋಗಲಾಗಿಲ್ಲ, ಸದ್ಯದಲ್ಲೇ ಕ್ಷೇತ್ರಕ್ಕೆ ತೆರಳಿ‌ ಪರಿಶೀಲಿಸುವೆ‌ ಹಾಗೂ ಗೋವಿಂದ ತೀರ್ಥದ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಧಾರ್ಮಿಕ ದತ್ತಿ ದೇವಸ್ಥಾನದ ಯಕ್ಷಗಾನ ಮೇಳಗಳ ಕಲಾವಿದರಿಗೆ ಪೂರ್ಣಾವಧಿ ಸಂಬಳ ನೀಡಲು ಮಾನವೀಯತೆಯಡಿ ಸೂಚನೆ ನೀಡಲಾಗಿದ್ದು ಬಹುತೇಕ‌ ಎಲ್ಲಾ ದೇವಸ್ಥಾನಗಳು ಈ ಕೆಲಸ ಮಾಡುತ್ತಿದೆ. ‌ಒಂದೊಮ್ಮೆ ಪಾಲಿಸದಿದ್ದ ದೇವಸ್ಥಾನಗಳಲ್ಲಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಡದ ರೀತಿಯಲ್ಲಿ ನಿಯಮ ಅನುಷ್ಟಾನಕ್ಕೆ ಮತ್ತೊಮ್ಮೆ ಸೂಚಿಸಲಾಗುತ್ತದೆ ಎಂದರು.

ಜಾರಕಿಹೊಳಿ ರಾಜಿನಾಮೆ ವಿಚಾರದಲ್ಲಿ ಪ್ರತಿಕ್ರಿಯಿಸಲು ಸಚಿವ ಕೋಟ ನಿರಾಕರಿಸಿದ್ದು ಕೊರೋನಾ‌ ವ್ಯಾಪ್ತಿಯಲ್ಲಿ ಈ ವಿಚಾರ ಬರುವುದಿಲ್ಲ..ಮತ್ತೆ ಮಾತನಾಡೋಣ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.