ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೀರ್ಥಕ್ಷೇತ್ರ ಬೆಳ್ಕಲ್ ಗೋವಿಂದ ತೀರ್ಥ ಇತ್ತಿಚೆಗೆ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಬದಲಾಗುತ್ತಿದ್ದು ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು.

ಪ್ರವಾಸದ ಹೆಸರಲ್ಲಿ ಬೆಟ್ಟ ಹತ್ತಿ ಬರುವ ಒಂದಷ್ಟು ಜನರು ಇಲ್ಲಿ ಮದ್ಯಪಾನ ಹಾಗೂ ಗುಂಡು ತುಂಡುಗಳ ಪಾರ್ಟಿಗಳನ್ನು ನಡೆಸಿ ಅಪವಿತ್ರಗೊಳಿಸಿದ ಕುರುಹುಗಳು ಯಥೇಚ್ಚವಾಗಿ ಕಂಡು ಬರುತ್ತಲಿದ್ದು, ಇನ್ನಿತರ ಅನೈತಿಕ ವ್ಯವಹಾರಗಳು ಕೂಡ ನಡೆಯುತ್ತಿದೆ ಎನ್ನಲಾಗಿದೆ.
ಹಿಂದು ಧರ್ಮೀಯರ ಅತ್ಯಂತ ಪವಿತ್ರ ಕ್ಷೇತ್ರವಾಗಿ ಭಕ್ತಜನರಿಗೆ ಅತ್ಯಂತ ಪ್ರೀತಿಯ ಕ್ಷೇತ್ರವಾಗಿರುವ ಈ ತೀರ್ಥಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಹಿಂದು ಭಾವನೆಗಳ ಮೇಲೆ ನಡೆಯುತ್ತಿರುವ ಪ್ರಹಾರವಾಗಿದ್ದು ಈ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಿ,ಧಾರ್ಮಿಕ ಕ್ಷೇತ್ರದ ಪಾವಿತ್ರತೆಯನ್ನು ರಕ್ಷಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಹಿಂದು ಜಾಗರಣ ವೇದಿಕೆಯ ಪರವಾಗಿ ಕೊಲ್ಲೂರು ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಲಾಯಿತು.ಅದಕ್ಕೂ ಮೊದಲು ನೂರಾರು ಕಾರ್ಯಕರ್ತರು ಗೋವಿಂದ ತೀರ್ಥದ ತನಕ ಪಾದಯಾತ್ರೆ ನಡೆಸಿ ಅಲ್ಲಿ ಸ್ವಚ್ಚತಾ ಕಾರ್ಯನಡೆಸಿದರು.
ಪುಣ್ಯಕ್ಷೇತ್ರಗಳನ್ನು ಅಪವಿತ್ರಗೊಳಿಸುವುದರ ವಿರುದ್ದ ಮುಂದಿನ ದಿನಗಳಲ್ಲಿ ಹಿಂಜಾವೇ ವತಿಯಿಂದ ನಿರಂತರ ಹೊರಾಟ ನಡೆಯಲಿದೆ ಎಂಬ ಆಗ್ರಹ ಕೇಳಿಬಂತು.
ಕೊಲ್ಲೂರು ಠಾಣೆ ಪಿಎಸ್ಐ ನಾಸೀರ್ ಹುಸೇನ್ ಅವರಿಗೆ ಮನವಿ ನೀಡಲಾಯಿತು.
ಈ ವೇಳೆ ಮುಖಂಡರಾದ ವಾಸು ಗಂಗೊಳ್ಳಿ , ಪ್ರಶಾಂತ್ ನಾಯಕ್, ಮಹೇಶ್ ಬೈಲೂರು, ಶ್ರೀಕಾಂತ್ ಶೆಟ್ಟಿ, ರಮೇಶ್ ಕಲ್ಲೊಟ್ಟೆ, ಹರೀಶ್ ಸೆಳ್ಕೋಡ್, ರಾಜೇಶ್ ಬೈಂದೂರು, ಕೃಷ್ಣ ಆಚಾರ್ ಮುದೂರ್, ರತ್ನಾಕರ ಗಂಗೊಳ್ಳಿ, ವೇದನಾಥ್ ಹೆರಂಜಾಲ್,ಪ್ರವೀಣ್ ಯಕ್ಷಿಮಠ,ಆದರ್ಶ ಕೋಟೇಶ್ವರ, ನವೀನ್ ಗಂಗೊಳ್ಳಿ ಇದ್ದರು.
Comments are closed.