ಕರಾವಳಿ

ಮಾಜಿ ಶಾಸಕ ಬಾವಾ ಅವರು ಒಂದು ತಿಂಗಳ ಹಿಂದೆ ಪ್ರಾರಂಭಿಸಿದ್ದ ಕೋವಿಡ್ ಕೇರ್ ಸಮಾರೋಪ

Pinterest LinkedIn Tumblr

ಮಂಗಳೂರು / ಸುರತ್ಕಲ್: ಮಂಗಳೂರು ಉತ್ತರ ಮಾಜಿ ಶಾಸಕ ಡಾ. ಬಿ.ಎ.ಮೊಹಿದಿನ್ ಬಾವಾ ಅವರು ಪಣಂಬೂರು ಮುಸ್ಲಿಂ ಜಮಾತ್ ಹಾಗೂ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಸಹಯೋಗದೊಂದಿಗೆ ಕಾಟಿಪಳ್ಳ ಜಾಸ್ಮಿನ್ ಮಹಲ್ ನಲ್ಲಿ ಒಂದು ತಿಂಗಳ ಹಿಂದೆ ಪ್ರಾರಂಭಿಸಿದ್ದ ಕೋವಿಡ್ ಕೇರ್ ಸೆಂಟರ್ ಸಮಾರೋಪ ಸಮಾರಂಭ ನಿನ್ನೆ ಮಧ್ಯಾಹ್ನ ನಡೆಯಿತು.

ಕಾರ್ಯಕ್ರಮದಲ್ಲಿ ಅನೇಕರು ಕೊರೋನದಿಂದ ಗುಣಮುಕ್ತರಾಗಲು ಕಾರಣವಾದ ಕೋವಿಡ್ ಕೇರ್ ಸೆಂಟರ್ ನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7 ಕಡೆ ಸ್ಥಾಪಿಸಿದ ಮೊಹಿದಿನ್ ಬಾವಾ ರವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾವಾ ರವರು ಕೊರೋನದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಈ ಮಾರಕ ರೋಗದ ವಿರುದ್ಧ ಹೋರಾಡುವ ಅಗತ್ಯವಿದೆ. ಆದುದರಿಂದ ಮಾನವೀಯತೆಯ ನೆಲೆಯಲ್ಲಿ ಸರ್ವಧರ್ಮೀಯರಿಗಾಗಿ ಈ ಕೋವಿಡ್ ಕೇರ್ ಸೆಂಟರ್ ಗಳನ್ನು ನಾನು ಮಾಡಿದ್ದೇನೆ. ಅದೇ ರೀತಿ ಎಲ್ಲರೂ ಇದರ ಪ್ರಯೋಜನವನ್ನು ಪಡೆದು ಗುಣಮುಖರಾಗಿರುವುದು ಅಪಾರ ಸಂತೋಷವನ್ನು ತಂದಿದೆ ಎಂದು ಹೇಳಿದರು.

ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು, ಮದ್ಯ, ಕೈಕಂಬ, ಕಾನ, ಜನತಾ ಕಾಲೋನಿ ಮುಂತಾದ ಕಡೆಗಳಲ್ಲಿ ಕೊರೋನ ಸೋಂಕಿತರ ಮನೆಗೆ ಹೋಗಿ ಅವರಿಗೆ ಧೈರ್ಯ ತುಂಬಿ ಅವರ ಚಿಕಿತ್ಸೆಗೆ ಬೇಕಾಗುವ ಔಷಧಿ, ಆಕ್ಸಿಜನ್ ಹಾಗೂ ಆಸ್ಪತ್ರೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಸುಮಾರು 12 ಮಂದಿಯ ಕೊರೋನ ವಾರಿಯರ್ಸ್ ತಂಡದ ನೇತೃತ್ವ ವಹಿಸಿದ್ದ ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಸಂಚಾಲಕ ಸೈಫುಲ್ಲಾ ರವರನ್ನು ಸನ್ಮಾನಿಸಲಾಯಿತು.

ಕೊರೋನ ವಾರಿಯರ್ಸ್ ಗಳಾದ ನಿಯಾಝ್, ಕೆ.ಎಂ.ಲತೀಫ್, ಅಬ್ದುಲ್ ಖಾದರ್ ಬಾವಾ, ಸಮದ್, ಶರೀಫ್, ಶರೀಫ್ ಎಲ್, ಸಫ್ವಾನ್, ಮನ್ಸೂರ್, ಶಂಶೀರ್, ಗಫೂರ್, ಸಲೀಂ ರಝಾಕ್ ಶ್ಯಾಡೊ, ಲತೀಫ್ ಮುಂತಾದವರನ್ನು ಅಭಿನಂದಿಸಲಾಯಿತು.

ಪಣಂಬೂರು ಮುಸ್ಲಿಂ ಜಮಾತ್ ನ ಅಧ್ಯಕ್ಷ ಅಹ್ಮದ್ ಬಾವಾ ಅಯ್ಯೂಬ್ ಅಧ್ಯಕ್ಷತೆ ವಹಿಸಿದ್ದರು. ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಪ್ರಸ್ತಾವನೆ ಗೈದರು.

ಉಪಾಧ್ಯಕ್ಷರುಗಳಾದ ಸಲೀಮ್ ರಝಾಕ್ ಶ್ಯಾಡೊ, ಮುಹಮ್ಮದ್ ಶಮೀರ್, ಏಳು ಕೋವಿಡ್ ಕೇರ್ ಸೆಂಟರ್ ಗಳ ಮೇಲ್ವಿಚಾರಕ ಡಾಕ್ಟರ್ ಭಾಸ್ಕರ್, ಕಾಟಿಪಳ್ಳ ಕೋವಿಡ್ ಕೇರ್ ಸೆಂಟರ್ ನ ಮೇಲ್ವಿಚಾರಕಿ ಶ್ರೀಮತಿ ಎವಿಲಿನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಿದಾಯತ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯ್ಯೂಮ್ ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಸಮದ್ ಕಾರ್ಯಕ್ರಮ ನಿರೂಪಿಸಿದರು.

Comments are closed.