ಕರಾವಳಿ

ಪ್ರತಿನಿತ್ಯ ಪತ್ರಿಕಾಗೋಷ್ಠಿ ನಡೆಸಿ ಅಪಪ್ರಚಾರ ಮಾಡುವ ಕಾಂಗ್ರೇಸ್ ಮುಖಂಡರು ರಾಜಸ್ಥಾನದ ವಿಚಾರದಲ್ಲಿ ಉತ್ತರಿಸಲಿ : ಶಾಸಕ ಕಾಮತ್ ಕಿಡಿ

Pinterest LinkedIn Tumblr

ಮಂಗಳೂರು : ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಅಧ್ಬುತವಾಗಿ ಸಾಧನೆ ಮಾಡಿದೆ. ಆದರೆ ವೃಥಾ ಆರೋಪದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೇಸ್ ಮುಖಂಡರು ರಾಜಸ್ಥಾನದಲ್ಲಿ ಕಾಂಗ್ರೇಸ್ ತಮ್ಮದೇ ಪಕ್ಷದ ಆಡಳಿತ ವೈಖರಿಯನ್ನು ಗಮನಿಸಲಿ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಸೋಂಕು ಹರಡದಂತೆ ಬಿಜೆಪಿ ಸರಕಾರವು ಅನೇಕ ಕಾರ್ಯಗಳನ್ನು ಮಾಡಿದೆ. ಲಸಿಕೆ ವಿತರಣೆ, ಪ್ಯಾಕೇಜ್ ಘೋಷಣೆಯ ಮೂಲಕ ಜನರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿದೆ‌.

ಅದರಲ್ಲೂ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕೋವಿಡ್ ನಿರ್ವಹಣೆಯಲ್ಲಿ ಅಗ್ರಪಂಕ್ತಿಯಲ್ಲಿದೆ. ಅಷ್ಟೇ ಅಲ್ಲ ಜನಸಂಖ್ಯೆಯಲ್ಲಿ ಜಗತ್ತಿನ ಅತೀ ದೊಡ್ಡ ದೇಶವಾಗಿರುವ ಭಾರತದಲ್ಲಿ ಅಮೇರಿಕಾಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಇಷ್ಟೆಲ್ಲಾ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿರುವಾಗ ಲಸಿಕೆಯ ವಿಚಾರದಲ್ಲಿ ಕಾಂಗ್ರೇಸಿಗರು ಪ್ರತಿನಿತ್ಯ ಪತ್ರಿಕಾಗೋಷ್ಠಿ ನಡೆಸುವುದು, ವೃಥಾ ಆರೋಪ ಮಾಡುವುದು ಸರ್ವ ಸಾಮಾನ್ಯ ಎಂಬಂತಾಗಿದೆ.

ಆದರೆ ನಮ್ಮ ಜಿಲ್ಲೆಯ ಕಾಂಗ್ರೇಸ್ ಮುಖಂಡರು ಪ್ರತಿನಿತ್ಯ ಪತ್ರಿಕಾಗೋಷ್ಠಿಯ ಹೊರತು ಜನರಿಗಾಗಿ ಏನೂ ಮಾಡುತ್ತಿಲ್ಲ. ಲಸಿಕೆಯ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಮತ್ತು ಕರ್ನಾಟಕ ರಾಜ್ಯ ಸರಕಾರವು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಕೇವಲ ಲಸಿಕೆ ಬರುವುದು ತಡವಾಗಿರುವುದನ್ನೇ ಬಂಡವಾಳವನ್ನಾಗಿಸಿ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೇಸ್ ಮುಖಂಡರಿಗೆ ತಮ್ಮದೇ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ 11.5 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ವ್ಯರ್ಥಗೊಳಿಸಲಾಗಿದೆ ಎನ್ನುವ ವಿಚಾರ ತಿಳಿದಿಲ್ಲವೇ. ಯಾಕೆ ಈ ಕುರಿತು ಕಾಂಗ್ರೇಸ್ ಮುಖಂಡರು ತುಟಿ ಬಿಚುತ್ತಿಲ್ಲ.

ಇಂತಹ ಕಠಿಣ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ‌ ಕಾಂಗ್ರೇಸ್ ಮುಖಂಡರಿಗೆ ಜನರಿಗೆ ನೆರವಾಗುವ ಮಾನಸೀಕತೆ ಇಲ್ಲ.

ಉತ್ತಮವಾಗಿ ನಿರ್ವಹಿಸುತ್ತಿರುವ ರಾಜ್ಯ, ಕೇಂದ್ರ ಸರಕಾರವನ್ನು ಟೀಕಿಸುತ್ತಿರುವ ಕಾಂಗ್ರೇಸ್ ಮುಖಂಡರು ರಾಜಸ್ಥಾನದ ವಿಚಾರದಲ್ಲಿ ತಮ್ಮ‌ನಿಲುವು ಸ್ಪಷ್ಟಪಡಿಸಲಿ. ಇಲ್ಲಿ ಪ್ರತಿನಿತ್ಯ ಪತ್ರಿಕಾಗೋಷ್ಠಿ ನಡೆಸುವ ಕಾಂಗ್ರೇಸ್ ಮುಖಂಡರು ರಾಜಸ್ಥಾನದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಿ ಎಂದು ಶಾಸಕ ಕಾಮತ್ ಕಿಡಿಕಾರಿದ್ದಾರೆ.

ಇದು ರಾಜಕೀಯ ಮಾಡುವ ಸಮಯವಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ರಾಜಕೀಯ ಮಾಡುತ್ತಿರುವ ಕಾಂಗ್ರೇಸ್ ನಾಯಕರು ಜಿಲ್ಲಾಡಳಿತದೊಂದಿಗೆ ಎಷ್ಟರ ಮಟ್ಟಿಗೆ ಕೈ ಜೋಡಿಸಿದ್ದಾರೆ.

ಸರಣಿ ಪತ್ರಿಕಾಗೋಷ್ಠಿ ನಡೆಸಿ ಅಗ್ಗದ ಪ್ರಚಾರ ಪಡೆಯುವುದು ಬಿಟ್ಟು ಒಬ್ಬ ಜವಬ್ದಾರಿಯತ ನಾಯಕರಾಗಿ ಜಿಲ್ಲೆಗೆ ಅವರ ಕೊಡುಗೆಗಳೇನು. ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದು ಬಿಟ್ಟು ಜನರ ಜೀವದ ರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.

Comments are closed.