ಕರ್ನಾಟಕ

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: ಶಿಕ್ಷಣ ಸಚಿವ ಸುರೇಶ್ ಕುಮಾರ್

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವುದಾಗಿ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಪ್ರಥಮ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಎಸ್ಎಸ್ಎಲ್’ಸಿ, ಪಿಯುಸಿ ಪರೀಕ್ಷೆ ಈ ವರ್ಷ ಬಹುಚರ್ಚಿತ ವಿಚಾರ . ಕಳೆದ ವರ್ಷ ಪರಿಸ್ಥಿತಿ ಬೇರೆ ಇತ್ತು. ಈ ವರ್ಷ ಎರಡನೇ ಅಲೆ ಇರುವುದರಿಂದ ಪರಿಸ್ಥಿತಿ ಇದೆ. ಒಂದು ವರ್ಗ ಪರೀಕ್ಷೆ ನಡೆಸಬೇಕು ಎಂದರೆ ಕೆಲವರು ಬೇಡ ಎನ್ನುತ್ತಿದ್ದಾರೆ. ಹೀಗಾಗಿ, ಬಿಇಓಗಳ ಮೂಲಕ ಮಕ್ಕಳು ಮತ್ತು ಪೋಷಕರ ಅಭಿಪ್ರಾಯ ಪಡೆದಿದ್ದೇವೆ. ಈ ವರ್ಷವೂ ಪರೀಕ್ಷೆಗೆ ತಯಾರಿ ನಡೆಸಿದ್ದೆವು. ಆದರೆ, ಕಳೆದ ಮೂರು ದಿನಗಳಿಂದ ಈ ನಿರ್ಧಾರ ಮರುಪರಿಶೀಲನೆ ಬಗ್ಗೆ ಚರ್ಚೆ ನಡೆಸಿದ್ದೇನೆ. ಶಿಕ್ಷಣ ತಜ್ಞರ ಅಭಿಪ್ರಾಯ ಸಹ ಪಡೆದಿದ್ದೇನೆ.

ಕೋವಿಡ್ ವ್ಯಾಪಕವಾಗಿರುವ ಕಾರಣ ರಾಜ್ಯದಲ್ಲಿ ಈ ವರ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ. ಪ್ರಥಮ ಪಿಯುಸಿಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ನೀಡಿ ಈ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಎ, ಎ+, ಬಿ, ಬಿ+ ಎಂಬಂತೆ ಗ್ರೇಡ್‌ ನೀಡಲಾಗುವುದು. ಯಾವುದೇ ವಿದ್ಯಾರ್ಥಿ ತನಗೆ ಸಿಕ್ಕ ಗ್ರೇಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ತೃಪ್ತಿ ಇಲ್ಲ ಎಂದರೆ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಬಿಕ್ಕಟ್ಟು ಮುಗಿದ ನಂತರ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

 

Comments are closed.