ಕರಾವಳಿ

ಯಕ್ಷ ಸಾಧಕರಾದ ಪಿ.ಕೆ.ನಾಯ್ಕ ಹಾಗೂ ಆನಂದ ಶೆಟ್ಟಿ ನಿಧನಕ್ಕೆ ಯಕ್ಷಾಂಗಣದ ಸಂತಾಪ

Pinterest LinkedIn Tumblr

ಮಂಗಳೂರು: ಯುಕೋ ಬ್ಯಾಂಕ್ ಮಂಗಳೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದು (1976 – 2001) ಸ್ವಯಂ ನಿವೃತ್ತಿ ಹೊಂದಿದ್ದ, ಹವ್ಯಾಸಿ ಯಕ್ಷಗಾನ ಅರ್ಥಧಾರಿ ಮತ್ತು ಸಂಘಟಕ ಪಿ.ಕೆ.ನಾಯ್ಕ ಶಿರೋಳ್ತಳಿಕೆ (65 ವ‌.) ಅವರ ಅಕಾಲಿಕ ನಿಧನಕ್ಕೆ ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಸಂತಾಪ ವ್ಯಕ್ತಪಡಿಸಿದೆ.

ಮಂಗಳೂರು ಗೊಲ್ಲರಕೇರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಸಂಘದಲ್ಲಿ ಸ್ವಂತ ಆಸಕ್ತಿಯಿಂದ ಅರ್ಥಗಾರಿಕೆಯನ್ನು ಆರಂಭಿಸಿದ್ದ ಪಿ.ಕೆ.ನಾಯ್ಕರು ಮುಂದೆ ಹವ್ಯಾಸಿಗಳ ಆಟ – ಕೂಟಗಳಲ್ಲಿ ಕಲಾವಿದರಾಗಿ ಪಾಲ್ಗೊಂಡಿದ್ದರು.

ತಮ್ಮ ಊರಲ್ಲೂ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸಿ ಹಲವು ಹಿರಿಯ ಕಲಾವಿದರ ಸಂಪರ್ಕ ಗಳಿಸಿಕೊಂಡರು. 2017 ರಲ್ಲಿ ಯಕ್ಷಾಂಗಣದ ತಾಳಮದ್ದಳೆ ಸಪ್ತಾಹದಲ್ಲಿಯೂ ಭಾಗವಹಿಸಿದ್ದ ಅವರು ಆಕಾಶವಾಣಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ತಮ್ಮೊಂದಿಗೆ ಜತೆಗಿದ್ದರು’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶನಿಪೂಜೆಗೊಬ್ಬನೇ ವಿಕ್ರಮ:

ಇದೇ ಸಂದರ್ಭದಲ್ಲಿ ಮೇ 21ರಂದು ನಿಧನರಾದ ಹಿರಿಯ ಯಕ್ಷಗಾನ ಅರ್ಥಧಾರಿ, ಇನ್ನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ (76) ಅವರಿಗೂ ಯಕ್ಷಾಂಗಣ ಮಂಗಳೂರು ಸಂತಾಪ ವ್ಯಕ್ತಪಡಿಸಿದೆ. ‘ಶನಿ ಪೂಜಾ ಸಂದರ್ಭದಲ್ಲಿ ನಡೆಸಲಾಗುವ ಶನಿ ಮಹಾತ್ಮೆ ತಾಳಮದ್ದಳೆಯಲ್ಲಿ ಇನ್ನ ಆನಂದ ಶೆಟ್ಟರ ವಿಕ್ರಮಾದಿತ್ಯನ ಅರ್ಥಗಾರಿಕೆ ತುಂಬಾ ಜನಪ್ರಿಯ. ಅವರು ಶನಿ ಪೂಜೆಗೊಬ್ಬನೇ ವಿಕ್ರಮ’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ರಾಧಾಕೃಷ್ಣ ಕಲ್ಚಾರ್, ಮಾಜಿ ಸದಸ್ಯ ಜಬ್ಬಾರ್ ಸಮೋ ಸಂಪಾಜೆ, ಯಕ್ಷಾಂಗಣದ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಡಾ.ದಿನಕರ ಎಸ್.ಪಚ್ಚನಾಡಿ, ಉಮೇಶ್ ಆಚಾರ್ಯ ಗೇರುಕಟ್ಟೆ, ನಾ.ಕಾರಂತ ಪೆರಾಜೆ, ಪ್ರಭಾಕರ ಎಲ್. ಉಡುಪಿ , ರಾಜಮಣಿ ರಾಮಕುಂಜ,ಕೆ.ಎಸ್. ಮಂಜುನಾಥ್, ಸುರೇಶ್ ಶೆಟ್ಟಿ ಪುಂಜಾಲಕಟ್ಟೆ , ಸತೀಶ್ ದೇವಾಡಿಗ ನಿಟಿಲಾಪುರ ಅವರೂ ಅಗಲಿದ ಕಲಾವಿದರಿಗಾಗಿ ತಮ್ಮ ಸಂತಾಪಗಳನ್ನು ತಿಳಿಸಿದ್ದಾರೆ.

Comments are closed.