ರಾಷ್ಟ್ರೀಯ

ಕೊರೋನಾ ವಿರುದ್ಧದ ಕಾರ್ಯತಂತ್ರ ಕ್ರಿಯಾಶೀಲವಾಗಿಯೂ, ಹೊಸತನದಿಂದ ಕೂಡಿರಬೇಕು: ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್​ ಅಗೋಚರ ಹಾಗೂ ಪದೇಪದೇ ರೂಪಾಂತರಗೊಳ್ಳುತ್ತಿರುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ಹೀಗಾಗಿ ಕೊರೋನಾ ವಿರುದ್ಧದ ಕಾರ್ಯತಂತ್ರ ಕ್ರಿಯಾಶೀಲವಾಗಿಯೂ, ಹೊಸತನದಿಂದ ಕೂಡಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಭಾಗಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದೇಶದಲ್ಲಿನ ಕೊರೋನಾ ಪರಿಸ್ಥಿತಿ ಸಂಬಂಧ 10 ರಾಜ್ಯಗಳ ಆಯ್ದ 54 ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ ನಡೆಸಿದರು. ಈ ವೇಳೆ ಕೊರೋನಾ ವಿರುದ್ಧದ ಕಾರ್ಯತಂತ್ರ ಸದಾ ಪ್ರಗತಿಯಿಂದ ಕೂಡಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳು ಹಾಗೂ ಯುವ ಜನಾಂಗ ಹೆಚ್ಚಾಗಿ ಕೊರೋನಾ ಅಪಾಯ ಎದುರಿಸುತ್ತಿದ್ದಾರೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು. ನಿಮ್ಮ ಜಿಲ್ಲೆಗಳಲ್ಲಿ ಮಕ್ಕಳು ಹಾಗೂ ಯುವ ಜನತೆಯಲ್ಲಿ ಕೊರೋನಾ ಹರಡುತ್ತಿರುವ ಬಗ್ಗೆ ನಿಗಾ ವಹಿಸಿ, ಅದರ ಗಂಭೀರತೆಯ ಬಗ್ಗೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ದೇಶ ಕೊರೋನಾ ಲಸಿಕೆ ಕೊರತೆಯನ್ನು ಎದುರಿಸುತ್ತಿದ್ದು, ನಿಮ್ಮ ಜಿಲ್ಲೆಗಳಲ್ಲಿ ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಿ. ಒಂದು ಡೋಸ್​ ವ್ಯಾಕ್ಸಿನ್​ ನಷ್ಟವಾದರೂ ಒಬ್ಬರನ್ನು ಕೊರೋನಾ ಸುರಕ್ಷತೆಯಿಂದ ದೂರವಿಟ್ಟಂತೆ ಎಂಬುವುದನ್ನು ತಿಳಿದು ಕಾರ್ಯ ನಿರ್ವಹಿಸಿ ಎಂದು ಪ್ರಧಾನಿ ಸೂಚಿಸಿದರು.

ದೇಶದಲ್ಲಿ ಕೊರೋನಾ ಸೋಂಕು ಇಳಿಮುಖ ಕಾಣುತ್ತಿದೆ. ಆದರೆ ನಾ ವು ನಮ್ಮ ಗುರಿ ತಲುಪಿಲ್ಲ. ಸೋಂಕಿನ ಪ್ರಕರಣಗಳು ದಾಖಲಾಗುತ್ತಿರುವವರೆಗೂ ನಾವು ಸುರಕ್ಷಿತವಲ್ಲ. ಹೀಗಾಗಿ ಸೋಂಕು ಕಡಿಮೆಯಾಗಿದೆ ಎಂದು ಮೈ ಮರೆಯುವಂತಿಲ್ಲ. ಕೋವಿಡ್​ ನಿಯಮಗಳ ಪಾಲನೆ ಕಟ್ಟುನಿಟ್ಟಿನಿಂದ ಜಾರಿಯಲ್ಲಿರಬೇಕು ಎಂದು ಪಿಎಂ ಎಚ್ಚರಿಸಿದರು. ಇನ್ನು ಜಿಲ್ಲಾಧಿಕಾರಿಗಳ ಜೊತೆ ನಡೆಸಿದ 2ನೇ ಹಂತದ ಚರ್ಚೆ ಇದಾಗಿದೆ. ಮೇ 18 ರಂದು ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳಿರುವ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಾಖಂಡ್​​, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಮೇ 18ರ ಸಭೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್‌ ಹೆಚ್ಚಿಸುವ ಬಗ್ಗೆ ಮಾತನಾಡಿದ್ದರು. ಲಾಕ್​ಡೌನ್​ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳೇ ಕ್ರಮ ಕೈಗೊಳ್ಳುವಂತೆ ಹೇಳಿದ್ದರು. ಜಿಲ್ಲೆಗಳಲ್ಲಿ ಲಾಕ್​ಡೌನ್​ ಹೇರುವ ಅಧಿಕಾರವನ್ನು ಜಿಲ್ಲಾಧಿಕಾರಿಗಳ ಹೆಗಲಿಗೆ ಹೊರಿಸಲಾಗಿದೆ.

ಇನ್ನು ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 2,76,070‌ ಕೊರೋನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಕೇಸ್​​​ಗಳ ಸಂಖ್ಯೆ 2,57,72,400ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಬುಧವಾರ 3,874 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,87,122ಕ್ಕೆ ಏರಿಕೆ ಆಗಿದೆ. ಈವರೆಗೆ 2,23,55,440 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 31,29,878 ಆಕ್ಟಿವ್ ಕೇಸುಗಳಿವೆ. ನಾಗರೀಕರು ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ, ಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿರಬೇಕು. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು.

Comments are closed.