ಕರಾವಳಿ

ಬೆಳ್ಳಂಬೆಳಿಗ್ಗೆ ರಸ್ತೆಗಿಳಿದ ಕುಂದಾಪುರ ಎಸಿ, ಡಿವೈಎಸ್ಪಿ, ಪೊಲೀಸರ ತಂಡ: ಹಲವು ವಾಹನಗಳು ಸೀಝ್

Pinterest LinkedIn Tumblr

ಕುಂದಾಪುರ: ಮಂಗಳವಾರ ಪ್ರಧಾನಿ ಮೋದಿಯವರ ಜೊತೆ ಡಿಸಿ ಸಭೆ ನಡೆದಿದ್ದು ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ ಬೆನ್ನಲ್ಲೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕೊರೋನಾ ಮಾರ್ಗಸೂಚಿಯ ಹಳೆ ಆದೇಶಕ್ಕೆ ಪೂರಕವಾಗಿ ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿಸುವಂತಿಲ್ಲ. ಆಯಾಯ ಭಾಗದವರು ಮನೆ ಬಳಿಯೇ ಅಗತ್ಯ ವಸ್ತು‌ ಖರೀದಿಸಬೇಕು ಎಂಬ ಸೂಚನೆ ನೀಡಲಾಗಿತ್ತು.

ಬುಧವಾರದಂದು ಬೆಳ್ಳಂಬೆಳಿಗ್ಗೆ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ಡಿ.ವೈ.ಎಸ್ಪಿ‌ ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿದ್ದು ಅನಗತ್ಯವಾಗಿ ಕುಂದಾಪುರ ಪೇಟೆಗಿಳಿದವರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಹೊರತುಪಡಿಸಿ ಇತರೆಡೆಗಳಿಂದ ಸಕಾರಣವಿಲ್ಲದೆ ಪೇಟೆಗೆ ಬಂದವರ ಬೈಕ್, ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಕುಂದಾಪುರ ಪಿ.ಎಸ್.ಐ ಸದಾಶಿವ ಗವರೊಜಿ, ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸಿದ್ದು, ಅನಗತ್ಯವಾಗಿ ಸಂಚಾರ ಮಾಡುತ್ತಿದ್ದವರ ಬೈಕುಗಳು, ಕಾರುಗಳನ್ನು ಸೀಝ್ ಮಾಡಲಾಗಿದೆ.

ಅನಾವಶ್ಯಕವಾಗಿ ಪೇಟೆಗೆ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಸಮೀಪದ ಅಂಗಡಿಗಳಲ್ಲೇ ಖರೀದಿಸಬೇಕು. ತೀರಾ ಅವಶ್ಯಕತೆ ಇದ್ದರಷ್ಟೇ ಪೇಟೆಗೆ ಬರಬಹುದು ಎಂದು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಕುಂದಾಪುರ ಪೊಲೀಸರು ಮೈಕ್ ಮೂಲಕ ಪ್ರಕಟಣೆ ಹೊರಡಿಸಿದ್ದರು‌.

(ವರದಿ- ಯೋಗೀಶ್ ಕುಂಭಾಸಿ)

Comments are closed.