
ಮಂಗಳೂರು, ಎಪ್ರಿಲ್ 25 ರೂಪಾಂತರ ಕೋರೋನ ಸೋಂಕಿನ ಬಗ್ಗೆ ಜನರು ಆತಂಕಪಡದೆ ಎಚ್ಚರದಿಂದ ಇರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಕೊರೋನಾದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮಂಗಳೂರಿನ ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಇಂದಿನ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ವೆನ್ಲಾಕ್ ಆಸ್ಪತ್ರೆ ಮತ್ತು 4 ತಾಲೂಕು ಆಸ್ಪತ್ರೆಗಳು, 6 ಸಮುದಾಯ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗುವುದು ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆಗಳನ್ನು ಜಿಲ್ಲಾಡಳಿತಕ್ಕೆ ಮೀಸಲಿರಿಸಿದ್ದು, ಯಾವುದೇ ಸಂದರ್ಭದಲ್ಲಿ ರೋಗಿಗಳನ್ನು ದಾಖಲು ಮಾಡುವಲ್ಲಿ ಆತಂಕವಾಗದಂತೆ ಕಣ್ಗಾವಲು ಮಾಡಲು ಕೋವಿಡ್ ನಿರ್ವಹಣಾ ಸಮಿತಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ ಎಂದರು.
ಮುಂಜಾಗೃತಾ ಕ್ರಮವಾಗಿ ಲಸಿಕೆ ಹಾಕುವುದು, ಸ್ವಾಬ್ ಟೆಸ್ಟ್ ಮತ್ತು ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸುವುದು, ಆಕ್ಸಿಜನ್ ಸರಬರಾಜು, ವೆಂಟಿಲೇಟರ್ ಕುರಿತು ಮುಂಜಾಗೃತಾ ಕ್ರಮ, ರೆಮಿಡಿಸಿವಿರ್ ಇಂಜೆಕ್ಷನ್ ಲಭ್ಯತೆ ಇವುಗಳ ಬಗ್ಗೆ ಆರೋಗ್ಯ ಇಲಾಖೆ ಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದು ಯಾರೇ ರೋಗ ಪೀಡಿತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಆ್ಯಂಬುಲೆನ್ಸ್, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಎಲ್ಲಾ ಕೊರತೆಗಳನ್ನು ನಿವಾರಿಸಲಾಗಿದ್ದು ಕೋವಿಡ್ ನಿವಾರಣೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜುಗೊಂಡಿದೆ ಎಂದರು.
ಪತ್ರೀ ತಾಲೂಕು ಆಸ್ಪತ್ರೆಗಳಲ್ಲಿ ಶಾಸಕರ ನೇತೃತ್ವದಲ್ಲಿ ಕುಂದುಕೊರತೆಗಳ ಬಗ್ಗೆ ಸಭೆ ನಡೆಸುತ್ತಿದ್ದು, ಸ್ಥಳೀಯವಾಗಿ ವಿಶೇಷ ಗಮನ ಕೊಡಲಾಗುತ್ತಿದೆ ಎಂದ ಅವರು ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿ 100 ಹಾಸಿಗೆಗಳ ಪೈಕಿ 50 ಹಾಸಿಗೆಗಳನ್ನು ಆಕ್ಸಿಜನ್ ಸಹಿತ ಕೋವಿಡ್ ಗೆ ಕಾಯ್ದಿರಿಸಲಾಗಿದೆ ಮತ್ತು 5 ಹಾಸಿಗೆಗಳ ಐ.ಸಿ.ಯು ಮತ್ತು ವೆಂಟಿಲೇಟರ್ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಕೂಡ ಜಿಲ್ಲಾಡಳಿತದ ವತಿಯಿಂದ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆಗೆ ಹೆಚ್ಚುವರಿ ವೆಂಟಿಲೇಟರ್ಗಳನ್ನು ಅಳವಡಿಸಲಾಗಿದೆ.
ರೆಮಿಡಿಸಿವಿರ್ ಚುಚ್ಚು ಮದ್ದು ಅಗತ್ಯಕ್ಕೆ ತಕ್ಕಂತೆ ತುರ್ತು ಲಭ್ಯವಿದ್ದು, ಹೆಚ್ಚುವರಿಯಾಗಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದ ಅವರು ತುರ್ತಾಗಿ ಬೇಡಿಕೆಗನುಗುಣವಾಗಿ ಇಂಜೆಕ್ಷನ್ ಒದಗಿಸುವುದಾಗಿ ಆರೋಗ್ಯ ಮಂತ್ರಿಗಳು ದೃಢೀಕರಿಸಿದ್ದಾರೆ ಎಂದರು.
ಕೊರೋನಾ ಪ್ರತಿಬಂಧಕ ಲಸಿಕೆ 45 ವರ್ಷದ ಮೇಲಿನ ವಯೋಮಾನದವರಿಗೆ ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲು ಅವಕಾಶಗಳಿದ್ದು, ದಿನವೊಂದಕ್ಕೆ ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಲಸಿಕೆಯನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ 18 ವರ್ಷದ ಮೇಲ್ಪಟ್ಟವರಿಗೂ ಸಹ ಲಸಿಕೆ ನೀಡಲು ಮುಂದಾಗಬೇಕು, ಹೆಚ್ಚುವರಿ ಬೇಡಿಕೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಹಾಗೂ ಜಿಲ್ಲೆಯಲ್ಲಿ ಆಕ್ಸಿಜನ್ಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.
ಕೊರೋನಾ ರೋಗ ಲಕ್ಷಣ ಹೊಂದಿದವರು ಈಗಾಗಲೇ 2548 ಮಂದಿ ಹೋಮ್ ಇಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 118 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಅವರು ಖಾಸಗಿ ಆಸ್ಪತ್ರೆಗಳಲ್ಲಿ 524 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಬಹುದು ಯಾವುದೇ ಸಂದರ್ಭದಲ್ಲಿ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಲು ಮತ್ತು ಕೊರೋನಾ ಪೀಡಿತರನ್ನು ದಾಖಲು ಮಾಡಿಕೊಳ್ಳಲು ಹಿಂಜರಿಕೆ ಮಾಡಬಾರದೆಂದು ಜಿಲ್ಲಾಡಳಿತದ ಪರವಾಗಿ ಎಲ್ಲಾ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದರು.
ಪ್ರತೀ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದ ವಿವಿಧ ಇಲಾಖೆಗಳಿಂದ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ಕಾರಣದಿಂದ ಆಸ್ಪತ್ರೆಗಳಿಗೆ ದಾಖಲಾಗುವವರಿಗೆ ಹಾಸಿಗೆಗಳ ಕೊರತೆ ಉಂಟಾಗದಂತೆ ನೇಮಿಸಿರುವ ನೋಡೆಲ್ ಅಧಿಕಾರಿಗಳು ಗಮನಿಸಬೇಕು ಎಂದ ಅವರು ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಜಿಲ್ಲಾಡಳಿತದ ವತಿಯಿಂದ ನೇಮಿಸಿರುವ “ಆರೋಗ್ಯ ಮಿತ್ರರು” ರೋಗಿಗಳ ಸಮಸ್ಯೆಗಳನ್ನು ಕೇಳಿ ದಾಖಲು ಮಾಡುವ ಮತ್ತು ಬಿಲ್ಗಳಲ್ಲಿ ಸಮಸ್ಯೆಗಳು ಇದ್ದಲ್ಲಿ ಪರಿಹರಿಸುವ ಕಾರ್ಯ ಮಾಡುವಂತೆ ಸೂಚಿಸಿದರು.
ವಾರಾಂತ್ಯದ ಕಫ್ರ್ಯೂ ನಲ್ಲಿ ಮದುವೆ ಮುಂತಾದ ಸಮಾರಂಭಗಳಿಗೆ ಅನುಮತಿ ಪಡೆದು ಸಂಚರಿಸಲು ಅವಕಾಶವಿದ್ದು, ಪೊಲೀಸ್ ಇಲಾಖೆಗೆ ಸಹಾನುಭೂತಿಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದ ಅವರು ಇದೇ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಗೆ ಬೇಕಾದ ಅಗತ್ಯ ಬೇಡಿಕೆಗಳನ್ನು ಜಿಲ್ಲೆಗೆ ಕೂಡಲೇ ಒದಗಿಸುವಂತೆ ಸಂಸದ ನಳಿನ್ ಕುಮಾರ್ ಜೊತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ. ಸದಾಶಿವ ಶ್ಯಾನುಬೋಗ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಹಾಗೂ ವ್ಯಾಕ್ಸಿನೇಷನ್ ನೊಡಲ್ ಅಧಿಕಾರಿ ಡಾ. ರಾಜೇಶ್, ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಕುಮಾರ್ ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಪಸ್ಥಿತರಿದ್ದರು.
Comments are closed.