ಅಂತರಾಷ್ಟ್ರೀಯ

ಅಮೆರಿಕನ್ನರ ರಕ್ಷಣೆಯೇ ಬೈಡೆನ್ ಸರಕಾರದ ಮೊದಲ ಆದ್ಯತೆ; ಭಾರತಕ್ಕೆ ಕೊರೊನಾ ಲಸಿಕಾ ಕಚ್ಚಾ ವಸ್ತುಗಳ ರಫ್ತಿಗೆ ವಿಧಿಸಿರುವ ನಿಷೇಧ ಕ್ರಮಕ್ಕೆ ಅಮೇರಿಕ ಸಮರ್ಥನೆ

Pinterest LinkedIn Tumblr

ನವದೆಹಲಿ:“ಅಮೆರಿಕನ್ನರ ಆರೋಗ್ಯ ರಕ್ಷಣೆಯೇ ಬೈಡೆನ್ ಸರಕಾರದ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಕೊರೊನಾ ಲಸಿಕೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿರುವ ನಿಷೇಧ ಕ್ರಮವನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿದೆ.

ಲಸಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿದೆ. ಇದರಿಂದಾಗಿ ಲಸಿಕೆ ಉತ್ಪಾದನೆಗೆ ಸಮಸ್ಯೆಯಾಗಿದೆ. ಈ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಸೀರಂ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಭಾರತ ಅಮೆರಿಕ ಸರ್ಕಾರಕ್ಕೆ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸಲು ಮನವಿ ಮಾಡಿತ್ತು.

ಭಾರತದ ಮನವಿಗೆ ಅಮೆರಿಕದಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ವಿದೇಶಾಂಗ ಸಚಿವ ಜೈಶಂಕರ್ ಅವರು ಮಾತುಕತೆ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ.

ಈ ಬಗ್ಗೆ ಮಾಧ್ಯಮಗಳು ಅಮೆರಿಕ ಸರ್ಕಾರದ ವಕ್ತಾರರ ಜೊತೆ ಪ್ರಶ್ನೆ ಕೇಳಿದ್ದಕ್ಕೆ, ಜಗತ್ತಿನ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಕೋವಿಡ್ 19 ಸೋಂಕಿಗೆ ಅಮೆರಿಕ ಜನತೆ ತುತ್ತಾಗಿದ್ದು, ಇಲ್ಲಿಯವರೆಗೆ 5.5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಬೈಡನ್ ಸರ್ಕಾರ ಅಮೆರಿಕ ಪ್ರಜೆಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಬೈಡೆನ್ ನಿಷೇಧ ಹೇರಿದ್ದಾರೆ. ಇದರಿಂದಾಗಿ ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆ ಮಾಡುವ ಸೀರಂ ಮತ್ತು ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಕಂಪನಿಗೆ ಸಮಸ್ಯೆಯಾಗಿದೆ.

ವಿದೇಶಗಳ ಲಾಬಿ ಏನು?
ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಭಾರತದ ಕೊರೊನಾ ಲಸಿಕೆಗೆಳು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ತಯಾರಾಗಿದ್ದ ಕಾರಣ ಬೇಡಿಕೆಯೂ ಹೆಚ್ಚಿತ್ತು. ಕೊರೊನಾ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಬೇಕು ಎಂದು ಭಾರತ ವಾದಿಸಿತ್ತು. ಆದರೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೆ ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದವು.

ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 80ಕ್ಕೂ ಅಧಿಕ ಬಡ ರಾಷ್ಟ್ರಗಳಿಗೆ ರಫ್ತು ಆಗತೊಡಗಿದಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೈಡನ್ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೆ ನಿರ್ಬಂಧ ಹೇರಿದರು. ಈ ನಡುವೆ ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಬ್ಬರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಪರಿಣಾಮ ಭಾರತದಲ್ಲಿ ಅಮೆರಿಕ ಸೇರಿದಂತೆ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಮೇಲೆ ಒತ್ತಡ ಹಾಕಿಸಿ ಲಸಿಕೆಗೆ ಅನುಮತಿ ನೀಡುವಲ್ಲಿ ವಿದೇಶಿ ಕಂಪನಿಗಳ ಲಾಬಿ ಕೊನೆಗೂ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ಈಗ ವ್ಯಕ್ತವಾಗುತ್ತಿದೆ.

Comments are closed.