ಕ್ರೀಡೆ

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಆಲ್‌ರೌಂಡ್‌ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ

Pinterest LinkedIn Tumblr

ಮುಂಬೈ: ಹಿಂದಿನ ವೈಫಲ್ಯ ಮರೆತು ಜಯದ ಹಾದಿ ಹಿಡಿಯುವ ಹಠದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್‌ ತಂಡ, ಕೋಲ್ಕತಾ ನೈಟ್‌ ರೈಡರ್ಸ್‌ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೋಲ್ಲತಾ ನೈಟ್‌ ರೈಡರ್ಸ್‌ ಆರಂಭದಿಂದಲೇ ಎಡವುತ್ತಾ ಮುಂದೆ ಸಾಗಿತು. ಅನಗತ್ಯ ರನ್‌ಔಟ್‌ಗಳು ಮತ್ತು ಎದುರಾಳಿಯ ಶಿಸ್ತಿನ ಬೌಲಿಂಗ್‌ ಎದುರು ರನ್‌ಗಳಿಸಲು ಪರದಾಟ ನಡೆಸಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್‌ಗಳ ಸಾಧಾರಣ ಮೊತ್ತ ಮಾತ್ರವೇ ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ಗೆ ಹೆಚ್ಚಿನ ಅಪಾಯ ಮೈಲೇಲೆ ಎಳೆದುಕೊಳ್ಳುವ ಅಗತ್ಯ ಇರಲಿಲ್ಲ. ವಿಕೆಟ್‌ ಕಾಯ್ದುಕೊಂಡು 20 ಓವರ್‌ಗಳವರೆಗೆ ಬ್ಯಾಟ್‌ ಮಾಡಿದರೆ ಸುಲಭವಾಗಿ ಗೆಲ್ಲಬಹುದು ಎಂಬುದನ್ನು ಅರಿತು ಆಡಿದ ಪರಿಣಾಮ 6 ವಿಕೆಟ್‌ಗಳ ಜಯ ಸಾಧ್ಯವಾಯಿತು.

ಓಪನರ್‌ಗಳಾದ ಜೋಸ್‌ ಬಟ್ಲರ್‌ (5) ಮತ್ತು ಯಶಸ್ವಿ ಜೈಸ್ವಾಲ್‌ (22) ಹೆಚ್ಚೇನು ಅಬ್ಬರಿಸಿದೇ ಇದ್ದರೂ, ನಾಯಕನ ಆಟವಾಡಿ ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿ ಹೊತ್ತ ಸಂಜು ಸ್ಯಾಮ್ಸನ್‌ 41 ಎಸೆತಗಳಲ್ಲಿ 2 ಫೋರ್‌ ಮತ್ತು 1 ಸಿಕ್ಸರ್‌ ನೆರವಿನಿಂದ ಅಜೇಯ 42 ರನ್‌ಗಳಿಸಿದರು. ಅವರೊಗೆ ಶಿವಂ ದುಬೇ (22) ಮತ್ತು ಡೇವಿಡ್‌ ಮಿಲ್ಲರ್‌ (ಅಜೇಯ 24) ಉತ್ತಮ ಸಾಥ್‌ ನೀಡಿ 18.5 ಓವರ್‌ಗಳಲ್ಲಿ ತಂಡಕ್ಕೆ 134/4 ರನ್‌ ತಂದುಕೊಟ್ಟು ಜಯದ ಮಾಲೆ ತೊಡಿಸಿದರು.

ಕೆಕೆಆರ್‌ ಅಂಕಪಟ್ಟಿಯ ಪಾತಾಳಕ್ಕೆ
ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಭರ್ಜರಿ ಜಯ ದಾಖಲಿಸಿದ್ದನ್ನು ಬಿಟ್ಟರೆ, ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ. ಪರಿಣಾಮ ಈಗ ಅಂಕಪಟ್ಟಿಯ ಕೊನೆಯ ಸ್ಥಾನ ಪಡೆಯುವಂತ್ತಾಗಿದೆ. ನಾಕ್‌ಔಟ್‌ ಹಂತಕ್ಕೆ ಕಾಲಿಡಬೇಕಾದರೆ ಕೆಕೆಆರ್‌ ತನ್ನ ಪಾಲಿನ ಉಳಿದ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲುವ ಪ್ರಯತ್ನ ಮಾಡಬೇಕಿದೆ. ಮತ್ತೊಂದೆಡೆ ರಾಜಸ್ಥಾನ್ ಟೂರ್ನಿಯಲ್ಲಿ ತನ್ನ 2ನೇ ಜಯ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

ಸಂಕ್ಷಿಪ್ತ ಸ್ಕೋರ್‌
ಕೋಲ್ಕತಾ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್‌ (ನಿತೀಶ್‌ ರಾಣಾ 22, ರಾಹುಲ್ ತ್ರಿಪಾಠಿ 36, ದಿನೇಶ್ ಕಾರ್ತಿಕ್ 25, ಪ್ಯಾಟ್‌ ಕಮಿನ್ಸ್‌ 10; ಕ್ರಿಸ್‌ ಮಾರಿಸ್‌ 23ಕ್ಕೆ 4).
ರಾಜಸ್ಥಾನ್ ರಾಯಲ್ಸ್‌: 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 134 ರನ್ (ಯಶಸ್ಸವಿ ಜೈಸ್ವಾಲ್ 22, ಸಂಜು ಸ್ಯಾಮ್ಸನ್‌ ಅಜೇಯ 42, ಶಿವಂ ದುಬೇ 22, ಡೇವಿಡ್‌ ಮಿಲ್ಲರ್‌ ಅಜೇಯ 24; ವರುಣ್ ಚಕ್ರವರ್ತಿ 32ಕ್ಕೆ 2, ಶಿವಂ ಮಾವಿ 19ಕ್ಕೆ 1, ಪ್ರಸಿಧ್ ಕೃಷ್ಣ 20ಕ್ಕೆ 1).
ಪಂದ್ಯಶ್ರೇಷ್ಠ: ಕ್ರಿಸ್‌ ಮಾರಿಸ್‌

Comments are closed.