ಕರಾವಳಿ

ವಾಹನಗಳನ್ನು ಟೋಯಿಂಗ್ ಮಾಡುವ ಮೊದಲು ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಲು ಸೂಚನೆ

Pinterest LinkedIn Tumblr

ಮಂಗಳೂರು : ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರೊಂದಿಗೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಶಾಸಕ ಕಾಮತ್, ವಾಹನ ನಿಲುಗಡೆ ನಿರ್ಬಂಧಿತ ಪ್ರದೇಶಗಳಿಂದ ವಾಹನ ಸವಾರರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡದೆ ಅಥವ‌ ಯಾವುದೇ ಮಾಹಿತಿ ನೀಡದೆ ಟೋಯಿಂಗ್ ಮಾಡುತ್ತಿರುವ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚೆ ನಡೆಸಿದ್ದೇನೆ.

ನಿರ್ಬಂಧಿತ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುವ ಸಂದರ್ಭದಲ್ಲಿ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಿ ಆ ಮೇಲೆ ಟೋಯಿಂಗ್ ಮಾಡಬೇಕು. ವಾಹನ ಸವಾರರ ಗಮನಕ್ಕೆ ತರದೆ ನೇರವಾಗಿ ಟೋಯಿಂಗ್ ಮಾಡಬಾರದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ವಾಹನ ನಿಲ್ಲಿಸಿ ಮೆಡಿಕಲ್ ತೆರಳುವ ಸಂದರ್ಭದಲ್ಲಿ ಯಾವುದೇ ರೀತಿಯ ಸೂಚನೆ ನೀಡದೆ ವಾಹನಗಳನ್ನು ಟೋಯಿಂಗ್ ಮಾಡಿರುವ ಕುರಿತು ದೂರುಗಳಿವೆ. ಹಲವಾರು ಬಾರಿ ಅಂಗಡಿಗೆ ತೆರಳಿದ ಗ್ರಾಹಕರು ಹೊರಬರುವಾಗ ವಾಹನವಿಲ್ಲದೆ ಕಂಗಾಲಾಗಿ ಪೋಲಿಸ್ ಠಾಣೆಗಳಿಗೆ ಅಲೆದಾಡಿದ ನಿದರ್ಶನಗಳಿವೆ. ಹಾಗಾಗಿ ಇವೆಲ್ಲವನ್ನೂ ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಲಾಖೆಯು ಸಹಕರಿಸಬೇಕೆಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಮೀನುಗಾರಿಕಾ ನಿಗಮದ ಅದ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅದ್ಯಕ್ಷರಾದ ಲೀಲಾವತಿ ಪ್ರಕಾಶ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪೂರ್ಣಿಮಾ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ರೂಪಾ. ಡಿ ಬಂಗೇರ ಉಪಸ್ಥಿತರಿದ್ದರು.

Comments are closed.