ರಾಷ್ಟ್ರೀಯ

ತಮಿಳುನಾಡು ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ; ಮತದಾರರನ್ನು ಸೆಳೆಯಲು ಅತ್ಯಂತ ದುಬಾರಿ ಭರವಸೆಗಳನ್ನು ನೀಡಿದ ಆಡಳಿತಾರೂಢ ಎಐಎಡಿಎಂಕೆ !

Pinterest LinkedIn Tumblr

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರನ್ನು ಸೆಳೆಯಲು ಅತ್ಯಂತ ದುಬಾರಿ ಭರವಸೆಗಳನ್ನು ನೀಡಿದೆ.

ಚುನಾವಣೆಗೂ ಮುನ್ನ ಘೋಷಿಸುವ ಉಚಿತ ಭರವಸೆಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಎಐಎಡಿಎಂಕೆ, ಪಡಿತರ ಕಾರ್ಡ್ ಹೊಂದಿರುವ ಎಲ್ಲ ಕುಟುಂಬಗಳಿಗೆ ಉಚಿತ ವಾಷಿಂಗ್ ಮಶೀನ್ ಮತ್ತು ಸೋಲಾರ್ ಗ್ಯಾಸ್ ಸ್ಟವ್‌ಗಳನ್ನು ನೀಡುವ ಭರವಸೆ ನೀಡಿದೆ. ಅಲ್ಲದೆ ಸರ್ಕಾರಿ ಉದ್ಯೋಗ ಹೊಂದಿಲ್ಲದ ಕುಟುಂಬಗಳಲ್ಲಿನ ಓರ್ವ ವ್ಯಕ್ತಿಗೆ ಸರ್ಕಾರಿ ಉದ್ಯೋಗದ ಆಶ್ವಾಸನೆ ನೀಡಿದೆ.

ಎಐಎಡಿಎಂಕೆ ಪ್ರಣಾಳಿಕೆ ಬಿಡುಗಡೆ ಮಾಡಿದ ಸಿಎಂ ಇಕೆ ಪಳನಿಸ್ವಾಮಿ ಮತ್ತು ಡಿಸಿಎಂ ಒ ಪನ್ನೀರ್ ಸೆಲ್ವಂ ಅವರು, ಸಾಮಾನ್ಯ ಜನರ ಆರ್ಥಿಕ ಹೊರೆ ಕಡಿಮೆ ಮಾಡಲು ವರ್ಷಕ್ಕೆ ಆರು ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದು, ಮಹಿಳೆಯರಿಗೆ ತಿಂಗಳಿಗೆ ರೂ .1,500 ನೆರವು, ಉಚಿತವಾಗಿ ಕೇಬಲ್ ಟಿವಿ ಸಂಪರ್ಕ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಸೇರಿದಂತೆ ಒಟ್ಟು 163 ಭರವಸೆಗಳನ್ನು ನೀಡಿದ್ದಾರೆ.

ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ಪುನರ್‌ಪರಿಶೀಲಿಸಲು ಕೇಂದ್ರವನ್ನು ಒತ್ತಾಯಿಸುವುದು ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳುವ ಬಗ್ಗೆ ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.

ನಾವು ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಯನ್ನು ಜನರ ಮುಂದಿಡುತ್ತಿದ್ದೇವೆ. ಜನರಿಗೆ ಅಮ್ಮಾ ಸರ್ಕಾರ ಏನೆಂಬುದು ಗೊತ್ತಿದೆ. ಭರವಸೆ ಈಡೇರಿಸುವ ವಿಚಾರದಲ್ಲಿ ಸರ್ಕಾರ ದಾಖಲೆ ಮಾಡಿದೆ ಎಂದು ಸಿಎಂ ಹಾಗೂ ಡಿಸಿಎಂ ಹೇಳಿದ್ದಾರೆ.

Comments are closed.