
ಮಂಗಳೂರು, ಮಾರ್ಚ್ 04 : ಕಿವಿಯು ದೇಹದ ಪ್ರಮುಖ ಅಂಗವಾಗಿದ್ದು, ಕಿವಿಯನ್ನು ಸೂಕ್ಷ್ಮವಾಗಿ ಇಟ್ಟುಕೊಳ್ಳುವುದು ಅತೀ ಅವಶ್ಯಕ. ಶ್ರವಣ ಸಮಸ್ಯೆ ಬಗ್ಗೆ ನಿರ್ಲಕ್ಷ ವಹಿಸಿದ್ದಲ್ಲಿ ಶಾಶ್ವತ ಕಿವುಡತನ ಉಂಟಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯಾರಿ ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ವತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವೆನ್ಲಾಕ್ ಮಕ್ಕಳ ಆಸ್ವತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಶ್ರವಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಶ್ರವಣ ದೋಷ ದೂರ ಮಾಡುವ ಪ್ರಕ್ರಿಯೆ ಗರ್ಭಿಣಿಯರ ಆರೈಕೆಯಿಂದಲೇ ಪ್ರಾರಂಭವಾಗುತ್ತದೆ. ನವಜಾತ ಶಿಶು, ಅಂಗನವಾಡಿ ಹಾಗೂ ಶಾಲಾ ಹಂತದಲ್ಲಿಯೇ ಶ್ರವಣ ದೋಷ ಪತ್ತೆ ಹಚ್ಚಿದರೆ ಮುಂದೆ ದೊಡ್ಡಮಟ್ಟದಲ್ಲಿ ಆಗುವ ಸಮಸ್ಯೆಯನ್ನು ನಿವಾರಿಸಬಹುದು. ಆರೋಗ್ಯ ಇಲಾಖೆಯ ಐ.ಸಿ.ಇ ಚಟುವಟಿಕೆ ಮೂಲಕ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡುವುದರಿಂದ ಶ್ರವಣ ದೋಷ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶ್ರವಣ ದೋಷ ಇದ್ದಲ್ಲಿ ಮಾನವನ ಮೆದುಳು ಚುರುಕಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದ ಅವರು, ಕಿವಿಯು ಮನುಷ್ಯನ ದೇಹದ ಒಂದು ಅತ್ಯಂತ ಸೂಕ್ಷ್ಮವಾದ ಆಂಗವಾಗಿದೆ ಇದರ ಬಗ್ಗೆ ಪ್ರತಿಯೊಬ್ಬರೂ ನಿರ್ಲಕ್ಷ್ಯವಹಿಸದಂತೆ ತಿಳಿಸಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ. ಸದಾಶಿವ ಶ್ಯಾನುಭೋಗ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಸಂವಹನ ಕ್ರಿಯೆ ಸರಿಯಾಗಿರಬೇಕೆಂದರೆ ಶ್ರವಣ ಶಕ್ತಿ ಸರಿಯಾಗಿರುವುದು ಮುಖ್ಯವಾಗಿರುತ್ತದೆ.
ಗರ್ಭಾವಸ್ಥೆಯಿಂದ ವಯಸ್ಕರವರೆಗೂ ವಿವಿಧ ಹಂತದಲ್ಲಿ ವಿವಿಧ ಕಾರಣಗಳಿಂದ ಕಿವುಡುತನದ ಸಮಸ್ಯೆ ಬರುತ್ತದೆ. ಶಬ್ದಮಾಲಿನ್ಯ, ದೈಹಿಕ ಗಾಯದಿಂದ ಆಗುವ ಕಿವುಡುತನವನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದರೆ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು, ಶ್ರವಣ ದೋಷ ಪರಿಹರಿಸುವ ನಿಟ್ಟಿನಲ್ಲಿ ಇದನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತರಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞ ಡಾ. ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಇಎನ್ಟಿ ತಜ್ಞೆ ಡಾ. ಹೇಮಲತಾ, ಹಿರಿಯ ಮಕ್ಕಳ ತಜ್ಞ, ಡಿಇಐಸಿ ನೋಡಲ್ ಅಧಿಕಾರಿ ಡಾ. ಯು.ವಿ. ಶೆಣೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ. ದೀಪಾ ಪ್ರಭು ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ (ಪ್ರಭಾರ) ಜ್ಯೋತಿ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Comments are closed.