ರಾಷ್ಟ್ರೀಯ

ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಆಯೋಜಿಸಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನಕ್ಕೆ ಆಹ್ವಾನ ನೀಡಿದ ಭಾರತ!

Pinterest LinkedIn Tumblr

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ನಡೆಯುತ್ತಿರುವ ಸಾರ್ಕ್ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತ, ಪಾಕಿಸ್ತಾಕ್ಕೆ ಆಹ್ವಾನ ನೀಡಿದೆ.

ಮಾರಕ ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಭಾರತ ಗುರುವಾರ ದಕ್ಷಿಣ ಏಷ್ಯಾದ ಇತರ ಪ್ರಾದೇಶಿಕ ಸಹಕಾರ ರಾಷ್ಟ್ರಗಳೊಂದಿಗೆ ಆರೋಗ್ಯ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸಲಿದ್ದು, ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೂ ಆಹ್ವಾನ ನೀಡಲಾಗಿದೆ.

ಈ ಕಾರ್ಯಾಗಾರದಲ್ಲಿ ಕೋವಿಡ್-19 ರ ನಿರ್ವಹಣೆ, ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆ ಮತ್ತು ಸಾಂಕ್ರಾಮಿಕದ ಮಧ್ಯೆ ಉತ್ತಮ ಅಭ್ಯಾಸಗಳ ವಿನಿಮಯ ಕುರಿತ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಮಾರ್ಚ್ 15, 2020 ರಂದು, ಸಾರ್ಕ್ ಮುಖ್ಯಸ್ಥರ ವೀಡಿಯೊ ಸಮ್ಮೇಳನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಂತೀಯ ಕೊರೊನಾವೈರಸ್ ತುರ್ತು ನಿಧಿ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದರು. ಅದರಂತೆ ಜಾಗತಿಕ ಕೊರೋನವೈರಸ್ ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಈ ತುರ್ತು ನಿಧಿಯನ್ನು ಸ್ಥಾಪಿಸಲಾಯಿತು. ದಕ್ಷಿಣ ಏಷ್ಯಾ ಪ್ರದೇಶದಲ್ಲಿನ ಕೊರೊನಾವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು ಈ ಉಪಕ್ರಮವು ಪ್ರಯತ್ನಿಸುತ್ತಿದೆ ಮತ್ತು ಭಾರತವು ಈ ನಿಧಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಕೊಡುಗೆಯಾಗಿ ನೀಡುತ್ತದೆ ಎಂದು ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಈ ಪ್ರಸ್ತಾಪಕ್ಕೆ ಸಾರ್ಕ್‌ನ ಇತರೆ ಸದಸ್ಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದವು. ಕೊರೋನವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ತಯಾರಾಗುತ್ತಿರುವ ಕೋವಿಡ್ ಲಸಿಕೆಗಳನ್ನು ಜಗತ್ತಿನಾದ್ಯಂತ ಹಂಚಿಕೆ ಮಾಡುತ್ತಿದೆ. ನೆರೆಯ ಬಾಂಗ್ಲಾದೇಶಕ್ಕೆ 20 ಲಕ್ಷ ಡೋಸ್, ಮ್ಯಾನ್ಮಾರ್ 17 ಲಕ್ಷ ಡೋಸ್ , ನೇಪಾಳ 10 ಲಕ್ಷ ಡೋಸ್, ಭೂತಾನ್ ಗೆ 1.5 ಲಕ್ಷ ಡೋಸ್, ಮಾರಿಷಸ್ 1 ಲಕ್ಷ ಡೋಸ್, ಸೀಶೆಲ್ಸ್ 1 ಲಕ್ಷ ಡೋಸ್, ಶ್ರೀಲಂಕಾ 5 ಲಕ್ಷ ಡೋಸ್ ಮತ್ತು ಅಫ್ಘಾನಿಸ್ತಾನ 5 ಲಕ್ಷ ಡೋಸ್ ಸೇರಿದಂತೆ ವಿವಿಧ ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ.

ಸಾರ್ಕ್ ದೇಶಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ರಾಷ್ಟ್ರಗಳಿದ್ದು, ನವೆಂಬರ್ 2014, ನೇಪಾಳ ಸಾರ್ಕ್ ನಾಯಕರ ಶೃಂಗಸಭೆಯನ್ನು ಆಯೋಜಿಸಿದ್ದಾಗ, ಈ ರಾಷ್ಟ್ರಗಳ ನಾಯಕರು ಕೊನೆಯ ಬಾರಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು.

Comments are closed.