ಉಡುಪಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ನಿರ್ಮಿಸಲು 1,000 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನದ ಬಗ್ಗೆ ಸಂತೋಷವಾಗಿದೆ. ಹಿಂದೂ ಸಮಾಜದ ಐಕ್ಯತೆಯ ದೃಷ್ಟಿಯಿಂದ ಎಲ್ಲಾ ವರ್ಗದ ಜನರ ದೇಣಿಗೆ ಒಂದು ಪ್ರಮುಖ ಬೆಳವಣಿಗೆಯಾಗಿದೆ. ನಮ್ಮ ಗುರಿ ಕೇವಲ ರಾಮ ಮಂದಿರವನ್ನು ನಿರ್ಮಿಸುವುದಲ್ಲ. ನಮ್ಮ ಆದ್ಯತೆ ರಾಮ ರಾಜ್ಯವನ್ನು ಸ್ಥಾಪಿಸುವುದಾಗಿದೆ ಎಂದರು.
ಧರ್ಮದ ಆಧಾರದ ಮೇಲೆ ಮೀಸಲಾತಿ ಸರಿಯಲ್ಲ. ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಬಡವರ ಧ್ವನಿಯಾಗಿರಬೇಕು. ಹಿಂದುಳಿದ ವರ್ಗದಲ್ಲಿ ಅನುಕೂಲಸ್ಥರು ಮಾತ್ರ ಮೀಸಲಾತಿ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹಿಂದುಳಿದ ವರ್ಗದ ಅನೇಕ ಜನರು ನನ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ರೈತರು ಹಕ್ಕುಗಳ ಆಧಾರದ ಮೇಲೆ ಪ್ರತಿಭಟನೆ ನಡೆಸುವುದು ಸರಿಯಾಗಿದೆ. ಆದರೆ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶಗಳನ್ನು ಒದಗಿಸಿದ ಬಳಿಕವೂ ಪ್ರತಿಭಟನೆ ಮುಂದುವರಿಸುವುದು ಸರಿಯಲ್ಲ. ಇದರಿಂದ ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.
ಹಾಗೆಯೇ ಉಡುಪಿಯ ಕಲ್ಸಂಕದಲ್ಲಿನ ವೃತ್ತಕ್ಕೆ ‘ಜಗದ್ಗುರು ಮಧ್ವಾಚಾರ್ಯ ವೃತ್ತ’ ಎಂದು ಹೆಸರಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
Comments are closed.