ಕರಾವಳಿ

ಹೊಸ ಸ್ನೇಹಿತನೊಂದಿಗೆ ಬಾರ್‌ನಲ್ಲಿದ್ದ ಯುವತಿಗೆ ಹಳೆ ಸ್ನೇಹಿತರು,ಗೆಳೆಯರಿಂದ ಹಲ್ಲೆ: ಮೂವರು ಅಂದರ್

Pinterest LinkedIn Tumblr

ಮಂಗಳೂರು, ಫೆಬ್ರವರಿ.1: ಬಾರ್ ರೆಸ್ಟೋರೆಂಟ್ ವೊಂದರಲ್ಲಿ ಯುವತಿಯೋರ್ವಳು ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಾಗ ಆಕೆಯ ಹಳೆ ಸ್ನೇಹಿತ ಮತ್ತು ಆತನ ಗೆಳೆಯರು ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕದ್ರಿ ಸಮೀಪ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೋಡಿಕಲ್‌ನ ಸಂತೋಷ್ ಪೂಜಾರಿ (19), ಬೊಕ್ಕಪಟ್ಣದ ತ್ರಿಶೂಲ್ ಸಾಲ್ಯಾನ್ (19), ಅಶೋಕ್ ನಗರದ ಡ್ಯಾನಿಷ್ ಅಯರೋನ್ ಡಿಕ್ರೂಸ್ (18) ಎಂದು ಗುರುತಿಸಲಾಗಿದೆ.

ಜ.30ರಂದು ಮಧ್ಯಾಹ್ನ ಕದ್ರಿಯ ಬಾರ್ ಆಯಂಡ್ ರೆಸ್ಟೋರೆಂಟ್ ವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ಸಿಸಿಟಿವಿ ವಿಡಿಯೋ ತುಣುಕು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿಯು ತನ್ನ ಮೂವರು ಗೆಳೆಯರೊಂದಿಗೆ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾಗ ಏಕಾಏಕಿ ನುಗ್ಗಿದ ನಾಲ್ವರು ಯುವಕರ ತಂಡ ದಾಳಿ ನಡೆಸಿದೆ. ಹೋಟೆಲ್‌ನಲ್ಲಿ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಈ ವೇಳೆ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ. ಯುವತಿಯೊಂದಿಗೆ ಇದ್ದ ಯುವಕ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ.

ಈ ಕುರಿತು ನಗರದ ತನ್ನ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಪ್ರಮುಖ ಆರೋಪಿ ತ್ರಿಶೂಲ್‌ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು.

ನಂತರ ವೈಷಮ್ಯ ಉಂಟಾಗಿ ಯುವತಿ ಆತನಿಂದ ದೂರವಾಗಲು ನಿರ್ಧರಿಸಿದ್ದಳು. ಅದರಂತೆ ಆತ ನೀಡಿದ್ದ ಎಲ್ಲ ಗಿಫ್ಟ್‌ಗಳನ್ನು ಮರಳಿಸಲು ಕೆಲ ದಿನಗಳ ಹಿಂದೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪ ಬರುವಂತೆ ತ್ರಿಶೂಲ್ ಗೆ ಹೇಳಿದ್ದಳು.

ಈ ವೇಳೆಯೂ ತ್ರಿಶೂಲ್ ಯುವತಿಯ ಮೇಲೆ ದಾಳಿಗೆ ಯತ್ನಿಸಿದ್ದ. ಇದಾದ ನಂತರವೂ ತ್ರಿಶೂಲ್ ಆಕೆಯ ವಿರುದ್ಧ ವೈರತ್ವ ಸಾಧಿಸಿದ್ದ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

ಕಳೆದ ಜ.30ರಂದು ಬೆಂದೂರ್‌ವೆಲ್‌ನ ನಗರದ ರೆಸ್ಟೋರೆಂಟ್‌ನಲ್ಲಿ ಯುವತಿ ತನ್ನ ಸ್ನೇಹಿತರೊಂದಿಗೆ ‘ಬರ್ತ್ ಡೇ ಪಾರ್ಟಿ’ ಆಚರಿಸುತ್ತಿದ್ದ ವೇಳೆ ಪ್ರಮುಖ ಆರೋಪಿಯು ತನ್ನ ಸ್ನೇಹಿತರೊಂದಿಗೆ ಆಗಮಿಸಿ ಆಕೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದ.

ಈ ವೇಳೆ ಜೊತೆಗಿದ್ದ ಸ್ನೇಹಿತರು ಆಕೆಯನ್ನು ಕಾಪಾಡಲು ಯತ್ನಿಸಿದಾಗ ಓರ್ವ ಸ್ನೇಹಿತ ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ. ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

Comments are closed.