ಬೆಂಗಳೂರು: ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಆರ್.ಎನ್. ಶೆಟ್ಟಿ (92) ಡಿ.17ರಂದು ಗುರುವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಆರ್.ಎನ್. ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದರು. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಅವರದು. ಮುರುಡೇಶ್ವರದ ಸಮುದ್ರ ತೀರದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು.
ನಾಡಿನ ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ
— B.S.Yediyurappa (@BSYBJP) December 17, 2020
1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಯಶಸ್ಸು ಕಂಡವರು.
ಆರ್.ಎನ್ ಶೆಟ್ಟಿಯವರ ಪಾರ್ಥಿವ ಶರೀರವನ್ನು ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ಇಟ್ಟು ನಂತರದಲ್ಲಿ ಅಂತ್ಯಸಂಸ್ಕಾರವನ್ನು ಸಂಜೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Comments are closed.